ವಿಪಕ್ಷ ಸ್ಥಾನ ಪಡೆಯದ ಕಾಂಗ್ರೆಸ್ ರಿಜೆಕ್ಟೆಡ್ ಗೂಡ್ಸ್:ಡಿವಿಎಸ್
ಉಡುಪಿ: ಕಾಂಗ್ರೆಸ್ ದೇಶದ ರಿಜೆಕ್ಟೆಡ್ ಗೂಡ್ಸ್. ಅದಕ್ಕೆ ವಿಪಕ್ಷ ಸ್ಥಾನಮಾನ ಪಡೆಯುವ ತಾಕತ್ ಕೂಡ ಇಲ್ಲ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ವ್ಯಂಗ್ಯವಾಡಿದರು. ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲ ಇಲ್ಲದಿದ್ದರೂ ಸಿಎಎಗೆ ಅಂಗೀಕಾರ ಸಿಕ್ಕಿದೆ. ಲೋಕಸಭೆಯಲ್ಲಿ ಸಹ ಬೆಂಬಲ ಸಿಕ್ಕಿದೆ ಎಂದರು. ‘ಕಾಂಗ್ರೆಸ್‌ಗೆ ಐದೂವರೆ ವರ್ಷ ಎನ್ಡಿಎ ವಿರೋಧಿಸಲು ಏನೂ ಸಿಕ್ಕಿಲ್ಲ. ಈಗ ಜನರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಆಳವಾದ ಅಧ್ಯಯನ ಮಾಡದಿದ್ದರೆ ಗೊಂದಲ ಆಗುತ್ತದೆ. ಜನರ ಗೊಂದಲ ನಿವಾರಣೆಗೆ ನಾವು ಸಿದ್ಧರಿದ್ದೇವೆ. ದೇಶದ 130 ಕೋಟಿ ಜನರಿಗೆ ಕಾಯ್ದೆಯಿಂದ ಯಾವುದೇ ತೊಂದರೆ ಆಗಲ್ಲ’ ಎಂದು ಹೇಳಿದರು. ಸಿಎಎ ವಿರುದ್ಧ ಕೋರ್ಟ್‌ಗೆ ಹೋಗುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಣ್ಣತನ ಪ್ರದರ್ಶನ ಮಾಡಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯಲು ಅರ್ಹರಲ್ಲ ಎಂದು ಟೀಕಿಸಿದರು. ರಾಜ್ಯ ಕಾಂಗ್ರೆಸ್ ಏಳು ತಂಡಗಳಾಗಿ ಒಡೆದುಹೋಗಿದೆ. ಅದನ್ನು ಮೊದಲು ನಿಲ್ಲಿಸಲಿ. ಆ ನಂತರ ದೇಶ ಒಡೆಯುವ ಹೇಳಿಕೆ ಕೊಡಲಿ. ಬಿಜೆಪಿ ಧರ್ಮಾಧಾರಿತವಾಗಿ ದೇಶ ಒಡೆಯುವ ಕೆಲಸ ಮಾಡುತ್ತಿಲ್ಲ ಎಂದರು. ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗಿರುವ ವಿಶೇಷ ಅಧಿಕಾರ. ಅವರು ಈಗಾಗಲೇ ಹೈಕಮಾಂಡ್ ಜತೆ ಸಮಾಲೋಚನೆ ಮಾಡಿದ್ದಾರೆ. ಸಿಎಂ ಪ್ರಧಾನಿಗಳ ಜತೆಗೆ ದಾವೋಸ್ ಪ್ರವಾಸದಲ್ಲಿದ್ದು, ಅಲ್ಲಿಂದ ಬಂದ ಬಳಿಕ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಕೊಟ್ಟ ಭರವಸೆಯನ್ನು ಸಿಎಂ ಈಡೇರಿಸುತ್ತಾರೆ ಎಂದು ಹೇಳಿದರು. |