ಸರ್ಕಾರ ಉಳಿಸಲು ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಒತ್ತಡ ?
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ತಮ್ಮ ಬೆಂಬಲಿಗರನ್ನು ವಾಪಸ್ ಕರೆಸಿ, ಸರ್ಕಾರ ರಕ್ಷಿಸುವಂತೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹಾಕಿದೆ ಎನ್ನಲಾಗಿದೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕಳೆದ ಮೂರು ದಿನಗಳಿಂದ ಪ್ರಯತ್ನ ಮುಂದುವರಿಸಿದ್ದರೂ ಶಾಸಕರ ರಾಜೀನಾಮೆ ನೀಡುವುದು ನಿಂತಿಲ್ಲ. ಹಾಗಾಗಿ ಮತ್ತೊಬ್ಬ ಎಐಸಿಸಿ ಮುಖಂಡ ಗುಲಾಂನಬಿ ಆಜಾದ್ ಅವರನ್ನು ಪಕ್ಷದ ವರಿಷ್ಠರು ಮಂಗಳವಾರ ಸಂಜೆ ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಬೆಂಗಳೂರಿಗೆ ಬರುತ್ತಿದ್ದಂತೆ ರಾತ್ರಿ ಮುಖಂಡರ ಸಭೆ ನಡೆಸಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗ ಶಾಸಕರು ರಾಜೀನಾಮೆ ನೀಡುತ್ತಿದ್ದು, ಇದರಲ್ಲಿ ಅವರ ಕೈವಾಡ ಇದೆ ಎಂಬ ಅನುಮಾನ ಹೈಕಮಾಂಡ್ಗೆ ವ್ಯಕ್ತವಾಗಿದೆ. ಈಗಾಗಲೇ ರಾಜೀನಾಮೆ ನೀಡಿರುವ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ ಅವರು ಸಿದ್ದರಾಮಯ್ಯ ಬೆಂಬಲಿಗರು. ಎಂ.ಟಿ.ಬಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಿಸಿದ್ದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಬಾರದೆ, ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಈಗ ಅವರೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ, ಕಾಂಗ್ರೆಸ್ ತೊರೆಯುತ್ತಿರುವವರಲ್ಲಿ ಸಿದ್ದರಾಮಯ್ಯ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಅನುಮಾನ ಹೈಕಮಾಂಡ್ಗೆ ಮೂಡಿದೆ.
ಹಾಗಾಗಿ ತಮ್ಮ ಆಪ್ತರನ್ನು ಕರೆದು, ರಾಜೀನಾಮೆ ವಾಪಸ್ ಪಡೆದುಕೊಳ್ಳುವಂತೆ ಮಾಡಬೇಕು. ಸರ್ಕಾರ ರಕ್ಷಿಸುವ ಕೆಲಸ ಮಾಡಬೇಕು ಎಂದು ಅವರ ಮೇಲೆ ಆಜಾದ್ ಒತ್ತಡ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.