ಹೊರ ರಾಜ್ಯಗಳಿಂದ ಬರುವವರಿಗೆ ಕಡ್ಡಾಯವಾಗಿ ‌ ಕ್ವಾರಂಟೈನ್ ಮಾಡಿ: ಶೋಭಾ

ಉಡುಪಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವ ವ್ಯಕ್ತಿಗಳಿಗೆ ಕಡ್ಡಾಯವಾಗಿ ಇನ್‌ಸ್ಟಿಟ್ಯೂಟ್‌ ಕ್ವಾರಂಟೈನ್ ಮಾಡ ಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಕೋವಿಡ್‌–19 ಸೋಂಕು ತಡೆ ಕುರಿತು ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದರು.

ಹೊರ ರಾಜ್ಯಗಳಲ್ಲಿರುವ ಉಡುಪಿ ಜಿಲ್ಲೆಯವರು ಸೇವಾಸಿಂಧು ವೆಬ್‌ ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆದು ಖಾಸಗಿ ವಾಹನಗಳ ಮೂಲಕ ಜಿಲ್ಲೆ ಪ್ರವೇಶಿಸಬೇಕು. ಗಡಿ ಪ್ರವೇಶಿಸಿದ ನಂತರ ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರನ್ನು ತಾಲ್ಲೂಕುವಾರು ವಿಂಗಡಿ ಸಬೇಕು. ಬಳಿಕ ಪ್ರಯಾಣಿಕರನ್ನು ಆಯಾ ತಾಲ್ಲೂಕು ಅಧಿಕಾರಿಗಳಿಗೆ ಹಸ್ತಾಂತರಿಸಿ ನಿಗಧಿಪಡಿಸಿದ ಇನ್‌ಸ್ಟಿಟ್ಯೂಷ್‌ಗಳಿಗೆ ಕರೆದೊಯ್ದು ನಿರ್ಧಿಷ್ಟ ಅವಧಿಯ ವರೆಗೂ ಕ್ವಾರಂಟೈನ್ ಮಾಡಬೇಕು ಎಂದು ಶೋಭಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಶಾಸಕರು ಕ್ಷೇತ್ರವಾರು ಸಮಸ್ಯೆಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದು ಒಪ್ಪಿಗೆ ಪಡೆಯಲಾಯಿತು.

ಜಿಲ್ಲಾ ಕೋವಿಡ್‌ ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಸೋಂಕು ತಡೆಗಟ್ಟುವಿಕೆಗೆ ತೆಗೆದುಕೊಂಡ ಕ್ರಮಗಳ ಕುರಿತು ಸಭೆಗೆ ಸವಿಸ್ತಾರ ಮಾಹಿತಿ ನೀಡಿದರು.

ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಹಾಗೂ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್‌ ಇದ್ದರು.

Leave a Reply

Your email address will not be published. Required fields are marked *

error: Content is protected !!