ವಿದೇಶಗಳಿಂದ ಕರ್ನಾಟಕಕ್ಕೆ ಬರಬೇಕೆ?: ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು!
ಬೆಂಗಳೂರು: ಇದೇ ಮೇ8ರಿಂದ ವಿವಿಧ ದೇಶಗಳಿಂದ ಕರ್ನಾಟಕಕ್ಕೆ ಬರಲು ಬಯಸುತ್ತಿರುವ ನಾಗರಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಸ್ತ್ರೃತ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ ಒಪಿ)ಯನ್ನು ಸೂಚಿಸಿದೆ.
ಕೊರೋನಾ ವೈರಸ್ ನಡುವೆ ವಿವಿಧ ದೇಶಗಳಿಂದ ರಾಜ್ಯಕ್ಕೆ ಹಿಂತಿರುಗಲು ಬಯಸುತ್ತಿರುವ 4.408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,748 ವಲಸಿಗರು ಮತ್ತು ವೃತ್ತಿಪರರು,557 ಹಡಗು ಸಿಬ್ಬಂದಿ ಸೇರಿದಂತೆ 10 ಸಾವಿರದ 823 ಮಂದಿ ಪ್ರಯಾಣಿಕರು ರಾಜ್ಯ ಸರ್ಕಾರದ ಈ ನಿಯಮಗಳನ್ನು ಪಾಲಿಸಬೇಕು.
ರಾಜ್ಯಕ್ಕೆ ಮೊದಲ ವಿಭಾಗದಲ್ಲಿ 6,100 ಮಂದಿ ಬಂದಿಳಿಯಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ರಾಜ್ಯಕ್ಕೆ ಬರುವವರು ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ ಮತ್ತು ಮಂಗಳೂರು, ಕಾರವಾರ ಬಂದರು ನಿಲ್ದಾಣಗಳಲ್ಲಿ ಬಂದಿಳಿಯಲಿದ್ದಾರೆ. ಆರೋಗ್ಯಾಧಿಕಾರಿಗಳ ತಂಡ ಅವರನ್ನು ತಪಾಸಣೆ ನಡೆಸಲಿದೆ. ಕೊರೋನಾ ಸೋಂಕಿನ ಲಕ್ಷಣ ಕಂಡುಬಂದವರನ್ನು ಕೆ ಸಿ ಜನರಲ್, ಸಿ ವಿ ರಾಮನಗರ ಸಾರ್ವಜನಿಕ ಆಸ್ಪತ್ರೆಗಳಿಗೆ ಕ್ವಾರಂಟೈನ್ ಗೆ ಕಳುಹಿಸಲಾಗುವುದು. ವಿದೇಶಗಳಿಂದ ಬರುವ ನಾಗರಿಕರಿಗೆ ಬಿಬಿಎಂಪಿ ಗುರುತುಪಡಿಸುವ ಹೊಟೇಲ್ ಗಳಲ್ಲಿ ವಾಸಿಸುವ ಆಯ್ಕೆಯನ್ನು ನೀಡಲಿದ್ದೇವೆ ಎಂದು ಹೇಳಿದರು.
ರಾಜ್ಯಕ್ಕೆ ಬರುವವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಅವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್, ಕ್ವಾರಂಟೈನ್ ವಾಚ್ ಮತ್ತು ಆಪ್ತಮಿತ್ರ ಆಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಶಂಕಿತ ಪ್ರಯಾಣಿಕರ ರಕ್ತದ ಮತ್ತು ಗಂಟಲು ದ್ರವ ಮಾದರಿಯನ್ನು 5,7 ಮತ್ತು 12ನೇ ದಿನ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು. ಐಸೊಲೇಷನ್ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ಇರಬೇಕಾಗುತ್ತದೆ. ಹೊಟೇಲ್ ನಲ್ಲಿ ಉಳಿದುಕೊಂಡ ಲಕ್ಷಣರಹಿತ ಜನರನ್ನು 5 ಮತ್ತು 7ನೇ ದಿನ ಪರೀಕ್ಷೆ ನಡೆಸಲಾಗುವುದು. ಆ ಪರೀಕ್ಷೆಯಲ್ಲಿ ಕೂಡ ನೆಗೆಟಿವ್ ಬಂದರೆ ಹೋಮ್ ಕ್ವಾರಂಟೈನ್ ನಲ್ಲಿ ಒಂದು ವಾರ ಇದ್ದು 14ನೇ ದಿನ ಪರೀಕ್ಷೆ ಮಾಡಲಾಗುತ್ತದೆ ಎಂದು ಪಾಂಡೆ ವಿವರಿಸಿದರು.