ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸಹಕರಿಸಿ: ಪೇಜಾವರ ಶ್ರೀ
ಬೆಳಗಾವಿ: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಬಿಜೆಪಿ ವರಿಷ್ಠ ನಾಯಕ ಎಲ್ ಕೆ ಅಡ್ವಾಣಿ, ಮತ್ತಿತರ ಕರಸೇವಕರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀಥ೯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳನ್ನು ಹಿಂಪಡೆಯಬೇಕೆನ್ನುವ ಹಿಂದೂ ಸಂಘಟನೆಗಳ ಬೇಡಿಕೆಗೆ ತಮ್ಮ ಸಹಮತವಿದೆ. ರಾಮ ಜನ್ಮಭೂಮಿ ನಿರ್ಮಾಣ ಕುರಿತಂತೆ ನಡೆದದ್ದು ಚಳವಳಿ. ಅದೊಂದು ಸ್ವಾತಂತ್ರ್ಯ ಆಂದೋಲನ. ಇಂತಹ ಆಂದೋಲನದಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಲಯ ತೀರ್ಪು ಯಾರಿಗೂ ಬೇಸರವಾಗಿಲ್ಲ. ಹಿಂದೂಗಳಿಗೆ ರಾಮಜನ್ಮಭೂಮಿಯ ಜಾಗ ನೀಡಿದರೆ ಮುಸ್ಲಿಮರಿಗೆ ಮಸೀದಿಯನ್ನು ನಿರ್ಮಿಸಲು ಜಾಗವನ್ನು ಕೊಟ್ಟಿದೆ. ಅನೇಕ ಮುಸ್ಲಿಮರು ತೀರ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಸೌಹಾರ್ದತೆ ಕೆಡಿಸುವ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಮುನ್ನಡೆಯಬೇಕಾಗಿದೆ. ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಅದರಂತೆ ಹಿಂದೂಗಳು ಮಸೀದಿಯನ್ನು ನಿರ್ಮಿಸಲು ಸಹಕರಿಸಿ ಸೌಹಾರ್ದತೆಯನ್ನು ಮೆರೆಯಬೇಕು ಎಂದು ಸ್ವಾಮೀಜಿ ಮನವಿ ಮಾಡಿಕೊಂಡರು. ಮುಂದೆ ಮಾತನಾಡಿದ ಅವರು, ಬಾಬ್ರಿ ಮಸೀದಿಯಂತೆ ಮಥುರಾ ಮತ್ತು ಕಾಶಿ ಗಳಲ್ಲೂ ಇಂತಹ ಪ್ರಕರಣಗಳು ಮರುಕಳಿಸಬಹುದು ಎನ್ನುವ ವಾದವನ್ನು ಅವರು ಒಪ್ಪಲಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದು ಯಾವುದೇ ಸಂಘರ್ಷಕ್ಕೆ ಅವಕಾಶ ಇಲ್ಲ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಟ್ರಸ್ಟ್ ನಿರ್ಮಿಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ನ ಮೂಲಗಳು ತಿಳಿಸಿವೆ.
ರಾಮ ಜನ್ಮಭೂಮಿ ಹೋರಾಟದಲ್ಲಿ ಪೇಜಾವರ ಶ್ರೀಗಳು ಪ್ರಮುಖ ಪಾತ್ರ ವಹಿಸಿದ್ದರು. ವೈಷ್ಣವ ಪಂಥದ ಪ್ರಮುಖ ಶ್ರೀಗಳಾಗಿದ್ದಾರೆ, ಜೊತೆಗೆ ದಕ್ಷಿಣ ಭಾರತದಲ್ಲಿ ಪ್ರಮುಖ ಸ್ವಾಮೀಜಿಗಳಲ್ಲಿ ಒಬ್ಬರಾಗಿರುವ ಕಾರಣ ಅವರನ್ನು ಟ್ರಸ್ಟ್ ಗೆ ನೇಮಕ ಮಾಡಲಾಗುವುದೆಂದು ಹೇಳಲಾಗುತ್ತಿದೆ