ಬಿಜೆಪಿಯಲ್ಲಿ ಹಿರಿಯಗೆ ಕೊಕ್? 12 ಅರ್ನಹ ಶಾಸಕರಿಗೆ ಮಣೆ

ಬೆಂಗಳೂರು: ಅತೃಪ್ತರು ಮತ್ತು ಬಿಜೆಪಿಯಲ್ಲಿ ಮೂರರಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎರಡನೇ ಹಂತದ ನಾಯಕರಿಗೆ ಸಚಿವ ಸ್ಥಾನ ನೀಡಲು ಕೆಲವು ಹಿರಿಯರು ‘ತ್ಯಾಗ’ಕ್ಕೆ ಸಿದ್ಧರಾಗಲೇಬೇಕಾಗಿದೆ. ಆ ಹಿರಿಯರು ಯಾರು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಆರಂಭವಾಗಿದೆ.
ಕಾಂಗ್ರೆಸ್‌– ಜೆಡಿಎಸ್‌ನಿಂದ ಬಂಡಾಯವೆದ್ದು, ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರಲ್ಲಿ ಕನಿಷ್ಠ 12 ಮಂದಿಗೆ ಸಂಪುಟದಲ್ಲಿ ಜಾಗ ಕಲ್ಪಿಸಬೇಕಾಗಿದೆ. ಇವರಲ್ಲಿ ಬೆಂಗಳೂರಿಗೆ ಸೇರಿದವರು ನಾಲ್ವರು ಇದ್ದಾರೆ. ನಗರದಲ್ಲೂ ಕೆಲವು ಹಿರಿಯರು ಸ್ಥಾನ ಬಿಟ್ಟುಕೊಡಬೇಕಾಗಿದೆ.
ಬೆಂಗಳೂರಿನಲ್ಲಿ ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ಅರವಿಂದ ಲಿಂಬಾವಳಿ, ರವಿಸುಬ್ರಹ್ಮಣ್ಯ, ಡಾ.ಅಶ್ವತ್ಥನಾರಾಯಣ. ಎಸ್‌.ಆರ್‌.ವಿಶ್ವನಾಥ್ ಪ್ರಬಲ ಆಕಾಂಕ್ಷಿಗಳು. ವಿ.ರಘು ಹಿರಿಯ ಶಾಸಕ ಆದರೆ ಎಂದೂ ಸಚಿವ ಸ್ಥಾನಕ್ಕೆ ಹಂಬಲ ವ್ಯಕ್ತಪಡಿಸಿದವರಲ್ಲ. ಸತೀಶ್‌ ರೆಡ್ಡಿ ಮತ್ತು ಉದಯ್‌ ಗರುಡಾಚಾರ್‌ ಕೂಡ ಆಕಾಂಕ್ಷಿಗಳು. ಅರವಿಂದ್‌ ಮತ್ತು ಅಶೋಕ್ ಅವರನ್ನು ಸಂಘಟನೆಗೆ ಬಳಸಿಕೊಂಡರೆ, ಅಶ್ವತ್ಥನಾರಾಯಣ ಮತ್ತು ರಘು ಅವರಿಗೆ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಪಕ್ಷದಲ್ಲಿ ನಡೆದಿದೆ.
ಅನರ್ಹಗೊಂಡ ಶಾಸಕರಲ್ಲಿ ಬೆಂಗಳೂರಿನವರಾದ ಎಸ್‌.ಟಿ.ಸೋಮಶೇಖರ್‌, ಎಂ.ಟಿ.ಬಿ.ನಾಗರಾಜ್‌, ಬೈರತಿ ಬಸವರಾಜ್‌, ಗೋಪಾಲಯ್ಯ ಸಚಿವ ಸ್ಥಾನದ ಆಕಾಂಕ್ಷಿಗಳು. ಇವರಲ್ಲಿ ಕನಿಷ್ಠ ಮೂವರಿಗೆ ಸಚಿವ ಸ್ಥಾನ ಕೊಟ್ಟರೂ ಬಿಜೆಪಿಯಿಂದ ಇಬ್ಬರು ಅಥವಾ ಮೂವರು ಶಾಸಕರಿಗೆ ಮಾತ್ರ ಅವಕಾಶ ಸಿಗಬಹುದು ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲೂ ಇದೇ ಸ್ಥಿತಿ ಇದೆ. ಬಾಲಚಂದ್ರ ಜಾರಕಿಹೊಳಿ, ಪ್ರತಾಪ್‌ಗೌಡ ಪಾಟೀಲ, ಬಿ.ಸಿ.ಪಾಟೀಲ, ಮಹೇಶ್‌ ಕುಮಠಳ್ಳಿ, ಶ್ರೀಮಂತ ಪಾಟೀಲ, ಆರ್‌.ಶಂಕರ್‌, ಆನಂದಸಿಂಗ್‌, ಆರ್‌.ಶಂಕರ್‌ ಉತ್ತರಕರ್ನಾಟಕ ಭಾಗಕ್ಕೆ ಸೇರಿದವರು. ಕರಾವಳಿ ಭಾಗದ ಶಿವರಾಮ್‌ ಹೆಬ್ಬಾರ್‌, ಚಿಕ್ಕಬಳ್ಳಾಪುರದ ಡಾ.ಸುಧಾಕರ್‌, ಮೈಸೂರು ಜಿಲ್ಲೆಯ ಎಚ್‌.ವಿಶ್ವನಾಥ್‌, ಪಕ್ಷೇತರ ನಾಗೇಶ್‌ ಅವರಿಗೂ ಸಂಪುಟದಲ್ಲಿ ಅಥವಾ ಪ್ರಮುಖ ನಿಗಮ ಮಂಡಳಿಯಲ್ಲಿ ಜಾಗ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಉತ್ತರ ಕರ್ನಾಟಕ ಭಾಗದ ಯಾವ ಹಿರಿಯ ಶಾಸಕರು ಸಚಿವ ‘ತ್ಯಾಗ’ ಮಾಡಬೇಕು ಎಂಬ ಪ್ರಶ್ನೆ ಎದ್ದಿದೆ.
ಕೆಲವು ಹಿರಿಯ ಶಾಸಕರು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಹೇಳಿದರೂ, ತಮ್ಮ ತಮ್ಮ ಜಾತಿ ಮಠಾಧೀಶರು ಮತ್ತು ಪ್ರಭಾವಿಗಳಿಂದ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಕೆಲಸ ನಡೆದಿದೆ. ಬುಧವಾರ ಕೆಲವು ಪಂಚಮಸಾಲಿ ಮುಖಂಡರು ಯಡಿಯೂರಪ್ಪ ಅವರನ್ನು ಭೇಟಿ ಆಗಿ ತಮ್ಮ ಸಮುದಾಯದವರಿಗೆ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದರು.
ಅದಕ್ಕೆ ಕಠಿಣವಾಗಿಯೇ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ರಾಜೀನಾಮೆ ನೀಡಿ ಬಂದಿರುವ ಅತೃಪ್ತ ಶಾಸಕರಿಗೆ ವಿಷ ಕೊಡಬೇಕೆ ಎಂದಿದ್ದರು.
ಈ ಬಾರಿ ಸಚಿವ ಸಂಪುಟಕ್ಕೆ ಆಯ್ಕೆಯನ್ನು ರಾಷ್ಟ್ರೀಯ ನಾಯಕರೇ ಮಾಡುವುದರಿಂದ ತಮ್ಮ ಪಾತ್ರ ಇರುವುದಿಲ್ಲ. ಒತ್ತಡ ಹೇರುವ ಕೆಲಸ ಮಾಡಬೇಡಿ ಎಂದೂ ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!