“ಕಾಫಿ ಕಿಂಗ್” ನ ಜೀವನಗಾಥೆ
ನವದೆಹಲಿ: ಅದು 1983ರ ಸಮಯ. ವಾಣಿಜ್ಯ ನಗರಿ ಮುಂಬೈಯ ಜೆಎಂ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯಲ್ಲಿ ಮ್ಯಾನೇಜ್ ಮೆಂಟ್ ಟ್ರೈನಿಯಾಗಿ ಕೆಲಸಕ್ಕೆ ಸೇರಿಕೊಂಡ ಕರ್ನಾಟಕದ ಚಿಕ್ಕಮಗಳೂರು ಮೂಲದ ಉತ್ಸಾಹಿ ತರುಣ ವಿಜಿ ಸಿದ್ದಾರ್ಥ್.
ಅಪಾರ ಕನಸು, ಆಕಾಂಕ್ಷೆ ಹೊತ್ತುಕೊಂಡಿದ್ದ ಕಾಫಿ ನಾಡು ಚಿಕ್ಕಮಗಳೂರಿನಿಂದ ಬಂದ ಸಿದ್ದಾರ್ಥ್ ನಂತರ ಅಕ್ಷರಶಃ ಉದ್ಯಮಿಯಾಗಿ ಬೆಳೆದರು. ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದರು. ಜೆಎಂ ಫೈನಾನ್ಸ್ ಕಂಪೆನಿಯಲ್ಲಿ ಸಿಕ್ಕಿದ ಅನುಭವ ಮತ್ತು ಜ್ಞಾನದೊಂದಿಗೆ ಬೆಂಗಳೂರಿಗೆ ಬಂದು ಹೂಡಿಕೆ ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್ ಮತ್ತು ಹೊಟೇಲ್ ಉದ್ಯಮದಲ್ಲಿ ಸಿದ್ದಾರ್ಥ್ ತೊಡಗಿಸಿಕೊಂಡರು.
ಸಿದ್ದಾರ್ಥ್ ಅವರ ಕುಟುಂಬ ಮೂಲತಃ ಉದ್ಯಮಿಗಳು. 140 ವರ್ಷಗಳಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಉದ್ಯಮ ಎಂಬುದು ಸಿದ್ದಾರ್ಥ್ ಅವರಿಗೆ ರಕ್ತದಲ್ಲಿಯೇ ಒಲಿದು ಬಂದಿತ್ತು. ತನ್ನೂರಿನ ಕಾಫಿಯ ಘಮವನ್ನು ಇಡೀ ವಿಶ್ವಕ್ಕೆ ಪರಿಚಯಿಸಬೇಕೆಂಬ ಅದಮ್ಯ ಉತ್ಸಾಹ, ಹುರುಪು ಅವರಲ್ಲಿತ್ತು. ಅದರ ಫಲವೇ ಕೆಫೆ ಕಾಫಿ ಡೇ(ಸಿಸಿಡಿ) ಎಂಬ ಸರಣಿ ಔಟ್ ಲೆಟ್ ಗಳು.
ಕೆಫೆ ಕಾಫಿ ಡೇ ಔಟ್ ಲೆಟ್ ಮೊದಲಿಗೆ ಆರಂಭವಾಗಿದ್ದು 1996ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬ್ರಿಗೇಡ್ ರಸ್ತೆಯಲ್ಲಿ. ಶ್ರೀಮಂತ ಕುಟುಂಬ, ನವ ತರುಣ, ತರುಣಿಯರು, ಐಟಿ ಕಂಪೆನಿಯಲ್ಲಿ ಕೆಲಸ ಮಾಡುವವರು, ಕಾಲೇಜಿಗೆ ಹೋಗುವ ಹುಡುಗ-ಹುಡುಗಿಯರಿಗೆ, ವಿದೇಶಿಯರಿಗೆ ಇದು ಕೆಫೆ ಕಾಫಿ ಡೇ ರಿಲ್ಯಾಕ್ಸ್ ಆಗಲು, ಒಂದಷ್ಟು ಹೊತ್ತು ಸಮಯ ಕಳೆಯಲು ಹೇಳಿ ಮಾಡಿಸಿದ ಜಾಗವಾಗಿತ್ತು. ವ್ಯವಹಾರ ಕೂಡ ಚೆನ್ನಾಗಿ ನಡೆಯಿತು. ಇದರಿಂದಾಗಿ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿ ರಾಜ್ಯದ ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಕೂಡ ವಿಸ್ತಾರವಾಯಿತು.
ಪ್ರಮುಖ ವಿಸ್ತಾರವಾದ ಸ್ಥಳದಲ್ಲಿ, ಉತ್ತಮ ಗಾಳಿ, ಬೆಳಕು ಹೊಂದಿರುವ ವಾತಾವರಣದಲ್ಲಿ, ವಿಶಿಷ್ಟ ಶೈಲಿಯ ಪೀಠೋಪಕರಣಗಳು ಮತ್ತು ಟ್ಯಾಗ್ ಲೈನ್ ‘A lot can happen over a coffee’ ನಗರ ಪ್ರದೇಶದ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದವರಿಗೆ ಇಷ್ಟವಾಗಿದ್ದು ಸುಳ್ಳಲ್ಲ.
ಸಿದ್ದಾರ್ಥ್ ಅವರಿಗೆ 10 ಸಾವಿರ ಎಕರೆ ಕಾಫಿ ತೋಟವಿದೆ. 90ರ ದಶಕದಲ್ಲಿ ಕಾಫಿ ಉದ್ಯಮದಲ್ಲಿ ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪೆನಿ(ಇಂದು ಕಾಫಿ ಡೇ ಗ್ಲೋಬಲ್) ಸಾಕಷ್ಟು ಹೆಸರು ಮಾಡಿತ್ತು. ಆರಂಭವಾದ ಎರಡೇ ವರ್ಷದಲ್ಲಿ ಈ ಕಂಪೆನಿ ಗ್ರೀನ್ ಕಾಫಿಯ ಎರಡನೇ ಅತಿದೊಡ್ಡ ರಫ್ತುದಾರ ಮತ್ತು ಭಾರತದ ಅತಿದೊಡ್ಡ ರಫ್ತು ಕಂಪೆನಿಯಾಗಿ ಬೆಳೆಯಿತು.
ಮುಂದಿನ ವರ್ಷಗಳಲ್ಲಿ ಈ ಉದ್ಯಮದಿಂದ ಸಿದ್ದಾರ್ಥ್ ಅವರಿಗೆ ಕಾಫಿ ಕಿಂಗ್ ಎಂಬ ಕೀರ್ತಿಯೇನೋ ಸಿಕ್ಕಿತು. ಆದರೆ ಕಾಫಿ ಡೇ ಉದ್ಯಮ ಕೈ ಹಿಡಿಯಲಿಲ್ಲ. ನಿರೀಕ್ಷಿಸಿದಷ್ಟು ಗ್ರಾಹಕರು ಬರಲಿಲ್ಲ. ಸಾಲದ ಮೇಲೆ ಸಾಲ ಬೆಳೆಯುತ್ತಾ ಹೋಯಿತು. 2009ರಲ್ಲಿ ಆದ ನಷ್ಟ 7.72 ಕೋಟಿ ರೂಪಾಯಿ 2016ರ ಹೊತ್ತಿಗೆ 150 ಕೋಟಿ ರೂಪಾಯಿಗೆ ಬೆಳೆಯಿತು. ಅದು ಸಿದ್ದಾರ್ಥ್ ಅವರು ಆತ್ಮಹತ್ಯೆಗೆ ನಿರ್ಧಾರ ಮಾಡುವ ಹೊತ್ತಿಗೆ 6,500 ಕೋಟಿ ರೂಪಾಯಿಗೆ ಬಂದು ತಲುಪಿತ್ತು.
ಕಾಫಿ ಉದ್ಯಮವಲ್ಲದೆ ಸಿದ್ದಾರ್ಥ್ ಮಾಹಿತಿ ತಂತ್ರಜ್ಞಾನ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಕೂಡ ತೊಡಗಿಸಿಕೊಂಡಿದ್ದರು. ಉದ್ಯಮದಲ್ಲಿ ಲಾಭ, ನಷ್ಟದ ಮಧ್ಯೆ ಸಾಕಷ್ಟು ವಿವಾದಗಳು ಕೂಡ ಕೇಳಿಬಂದವು. 2017ರಲ್ಲಿ ಅವರ 20ಕ್ಕೂ ಹೆಚ್ಚು ಉದ್ಯಮ ಕೇಂದ್ರಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ವಿಚಾರಣೆ ನಡೆಸಿತ್ತು.
ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ 23 ವರ್ಷಗಳ ಹಿಂದೆ ಆರಂಭವಾದ ಕೆಫೆ ಕಾಫಿ ಡೇ ಶಾಪ್ ಇಂದು ಮುಚ್ಚಿ ಹೋಗಿ ಅಲ್ಲಿ ಗಾರ್ಮೆಂಟ್ ಶಾಪ್ ಆರಂಭವಾಗಿದೆ. ಅಂದಿನ ಕಾಫಿ ಶಾಪ್ ಬಗ್ಗೆ ಹೇಳಿದ ಬ್ರಿಗೇಡ್ ಶಾಪ್ಸ್ ಅಂಡ್ ಎಸ್ಟಾಬ್ಲಿಷ್ ಮೆಂಟ್ಸ್ ಕಾರ್ಯದರ್ಶಿ ಸುಹೈಲ್ ಯೂಸಫ್, 1996ರಲ್ಲಿ ಕೆಫೆ ಕಾಫಿ ಶಾಪ್ ತೆರೆದಾಗ ಒಂದು ಕಪ್ ಕಾಫಿಗೆ 30ರಿಂದ 40 ರೂಪಾಯಿ ದರವಿತ್ತು. ಅದು ಬೇರೆ ಶಾಪ್ ಗಳಿಗಿಂತ ವಿಭಿನ್ನವಾಗಿದ್ದರಿಂದ ವಿದೇಶಿಯರು ಹೆಚ್ಚಾಗಿ ಬಂದು ಕುಳಿತು ಕಾಫಿ ಕುಡಿಯುತ್ತಿದ್ದರು ಎನ್ನುತ್ತಾರೆ.
90ರ ದಶಕದ ಹೊತ್ತಿಗೆ ಬೆಂಗಳೂರಿಗೆ ಮಾಹಿತಿ ತಂತ್ರಜ್ಞಾನ ಉದ್ಯಮ ಕಾಲಿಟ್ಟಿದ್ದು. ಬೃಹತ್ ಕಂಪೆನಿಗಳು, ಅಂತಾರಾಷ್ಟ್ರೀಯ ಕಂಪೆನಿಗಳು ಹುಟ್ಟಿಕೊಂಡವು. ಕೆಫೆ ಕಾಫಿ ಡೇಯ ಪರಿಕಲ್ಪನೆ ವಿಭಿನ್ನವಾಗಿತ್ತು. ಸೈಬರ್ ಕೆಫೆಯ ರೀತಿಯಲ್ಲಿ ಗ್ರಾಹಕರು ಬಂದು ಕಾಫಿ ಹೀರುತ್ತಾ ಹೆಚ್ಚಿನ ಮೊತ್ತ ನೀಡಿ ಇಂಟರ್ನೆಟ್ ಬ್ರೌಸ್ ಮಾಡಬಹುದಾದ ವ್ಯವಸ್ಥೆಯಿತ್ತು.