ಮರಣೋತ್ತರ ಪರೀಕ್ಷೆ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರ ಚಿಕ್ಕಮಗಳೂರಿಗೆ ರವಾನೆ
ಮಂಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾಫಿ ಕಿಂಗ್ ಸಿದ್ದಾರ್ಥ್ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲಾಗುತ್ತಿದೆ.
11 ಗಂಟೆಗೆ ಸುಮಾರಿಗೆ ಮೃತದೇಹ ಚಿಕ್ಕಮಗಳೂರಿಗೆ ರವಾನೆಯಾಗುತ್ತಿದ್ದು, ಎರಡು ಕಡೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲಿ ಕಾಫಿ ಡೇ ಸಿಬ್ಬಂದಿ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇಲೂರು ಚೇತನಹಳ್ಳಿಯ ಸಿದ್ಧಾರ್ಥ್ ಕಾಫಿ ಎಸ್ಟೇಟ್ ಹಾಗೂ ಎಬಿಸಿ ಕಾಫಿ ಕ್ಯೂರಿಂಗ್ ಆವರಣದಲ್ಲಿಯೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನೌಕರರು ಹಾಗೂ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರುವ ಸಾಧ್ಯೆತೆಗಳಿವೆ.
ಸೋಮವಾರ ಸಂಜೆಯಿಂದ ಮಂಗಳೂರಿನ ನೇತ್ರಾವತಿ ನದಿ ಸೇತುವೆಯ ಬಳಿಯಿಂದ ಕಾಣೆಯಾಗಿದ್ದ ಸಿದ್ದಾರ್ಥ್ ಅವರಿಗಾಗಿ ಸತತ 36 ಗಂಟೆಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಇದೀಗ ಅವರ ಮೃತದೇಹ ನೇತ್ರಾವತಿಯ ಹಿನ್ನೀರಿನಲ್ಲಿ ಪತ್ತೆಯಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕಾಫಿ ಡೇ ನೌಕಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.