ಕಾಫಿ ಸಾಮ್ರಾಟ್ ನ ಯುಗಾಂತ್ಯ -ಸಿದ್ದಾರ್ಥ್ ಮೃತ ದೇಹ ಪತ್ತೆ
ಮಂಗಳೂರು – ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ.
ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.
ಮೀನುಗಾರರು ಹೇಳಿದ್ದೇನು ?
ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದೆವು. ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅನುಮಾನದಲ್ಲಿ ದೋಣಿಯ ಬದಿಯಲ್ಲಿ ಶವವನ್ನು ಹಿಡಿದುಕೊಂಡು ದಡಕ್ಕೆ ತಂದಿದ್ದೇವೆ. ಆ ನಂತರ ಪೊಲೀಸರಿಗೆ ತಿಳಿಸಿದ್ದೇವೆ. ತಕ್ಷಣವೇ ರೌಂಡ್ಸ್ ನಲ್ಲಿರುವ ಪೊಲೀಸರಿಬ್ಬರು ಬಂದರು. ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ ನಂತರ ಅವರೆಲ್ಲ ಬಂದಿದ್ದಾರೆ ಎಂದು ರಿತೇಶ್ ತಿಳಿಸಿದ್ದಾರೆ.
ನದಿಗೆ ಹಾರಿದ್ದಾರೆ ಎಂಬ ಸ್ಥಳದಿಂದ ಮೃತದೇಹ ಸಿಕ್ಕಿದ ಜಾಗಕ್ಕೆ ಸುಮಾರು 4-5 ಕಿ.ಮೀ ದೂರವಿದೆ. ಅಲ್ಲಿ ಮೃತದೇಹ ಸಿಕ್ಕಿದೆ. ನಿನ್ನೆ ಮೀನುಗಾರಿಕಾ ಸಂಸ್ಥೆಯಿಂದ ಕರೆ ಬಂದಿತ್ತು. ಸ್ಥಳೀಯರಾಗಿರುವ ನಮಗೆ ಶೋಧ ಕಾರ್ಯ ಮಾಡಬೇಕೆಂಬ ಸೂಚನೆ ನೀಡಲಾಗಿತ್ತು. ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆ ಹುಡುಕಾಡಿದ್ದೇವೆ ಅಂದರು.
ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳವಿದ್ದು, ಮೃತದೇಹ ಸಿಕ್ಕಿದ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ 18-24 ಗಂಟೆ ಮೇಲೆ ಬರಲು ಬೇಕಾಗುತ್ತದೆ ಎಂಬುದು ನಮ್ಮ ಅಂದಾಜು. ಇಷ್ಟು ಗಂಟೆಯ ಬಳಿಕ ಮೃತದೇಹ ಊದಿಕೊಳ್ಳುತ್ತದೆ. ಹೀಗಾಗಿ ಅದು ನೀರಿನಿಂದ ಮೇಲೆ ಬರುತ್ತವೆ. ಸಿದ್ದಾರ್ಥ್ ಅವರನ್ನು ಪತ್ತೆ ಹಚ್ಚಿದ್ದಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಶಾಸಕ ಯು.ಟಿ ಖಾದರ್ ಅವರು ನಮಗೆ ಧನ್ಯವಾದ ತಿಳಿಸಿದ್ದಾರೆ ಎಂದರು.
ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ. ಮೃತದೇಹವನ್ನು ನಗರದ ವೆನ್ ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸೋಮವಾರ ಸಂಜೆ ಬೆಂಗಳೂರಿನಿಂದ ಇನೋವಾ ಕಾರಿನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ರಾತ್ರಿ 7.30 ರ ಸುಮಾರಿಗೆ ಕಾರಿನಲ್ಲಿ ಚಾಲಕನ ಜೊತೆ ಉಳ್ಳಾಲದತ್ತ ತೆರಳಿ ಕಾರನ್ನು ಒಂದು ಸೇತುವೆ ಬಳಿ ನಿಲ್ಲಿಸಲು ಹೇಳಿ, ಏಕಾಂಗಿಯಾಗಿ ಸೇತುವೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಆ ಬಳಿಕ ಚಾಲಕ ಸುಮಾರು 9 ಗಂಟೆಯವರೆಗೆ ಕಾದರೂ ಸಿದ್ಧಾರ್ಥ್ ಬರಲಿಲ್ಲ. ಇದಕ್ಕೆ ಆತಂಕಗೊಂಡು ಚಾಲಕ ಪೊಲೀಸ್ ಹಾಗೂ
ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ಮುಳುಗು ತಜ್ಞರು ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯ ನಂತರ ಮೃತ ದೇಹ ಪತ್ತೆಯಾಗಿದೆ.