ಕಂಬಳ ವೀರ ಶ್ರೀನಿವಾಸ ಗೌಡರನ್ನು ಅಭಿನಂದಿಸಿದ ಸಿಎಂ
ಬೆಂಗಳೂರು: ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಓಟ ಓಡಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಇಂದು ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂಪಾಯಿಯ ಚೆಕ್ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಸಿ.ಟಿ.ರವಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು .
ಕಂಬಳದ ಶ್ರೀನಿವಾಸ ಗೌಡರಿಗೆ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ ಲಕ್ಷ ರೂ. ನೆರವು ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಘೋಷಣೆ ಮಾಡಿದ್ದಾರೆ.
ಕಂಬಳ ಕ್ರೀಡೆಯಲ್ಲಿ ದಾಖಲೆ ವೇಗದಲ್ಲಿ ಓಡಿ ಭಾರತದ ಉಸೇನ್ ಬೋಲ್ಟ್ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಶ್ರೀನಿವಾಸಗೌಡ ಅವರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ 1 ಲಕ್ಷ ರೂ. ಆರ್ಥಿಕ ನೆರವು ಘೋಷಿಸಿದ್ದಾರೆ. ಕಂಬಳ ಕ್ರೀಡೆಯಲ್ಲಿ ಅತಿ ವೇಗವಾಗಿ ಕೋಣಗಳನ್ನು ಓಡಿಸಿ ದಾಖಲೆ ನಿರ್ಮಿಸಿದ ಶ್ರೀನಿವಾಸಗೌಡ ಅವರನ್ನು ನಗರದಲ್ಲಿ ಸೋಮವಾರ ಅಭಿನಂದಿಸಿ ಆರ್ಥಿಕ ಬಹುಮಾನ ಪ್ರಕಟಿಸಿದ್ದಾರೆ.
“ಶ್ರೀನಿವಾಸಗೌಡ ಅವರು ತಮ್ಮ ಪ್ರತಿಭೆ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಕಂಬಳ ಬೇಕು-ಬೇಡ ಎನ್ನುವವರು, ಅದಕ್ಕೆ ಅಡಚಣೆ ಉಂಟುಮಾಡುವವರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಜತೆಗೆ ಕಂಬಳ ಕ್ರೀಡೆಯಲ್ಲಿ ಪಾಲ್ಗೊಳ್ಳುವವರನ್ನು ಹುರಿದುಂಬಿಸುವ ಉದ್ದೇಶದಿಂದ ಮಲ್ಲೇಶ್ವರ ಕ್ರೀಡಾ ಪ್ರತಿಷ್ಠಾನದಿಂದ 1 ಲಕ್ಷ ರೂ ನೀಡುವುದಾಗಿ” ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು.