ಬಿರಿಯಾನಿ ಕಥೆ ಹೇಳಿದ ಸಿಟಿ ರವಿ : ಖಡಕ್ ಉತ್ತರ ಕೊಟ್ಟ ಸಿಎಂ
ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಬಿಜೆಪಿ ಶಾಸಕ ಸಿಟಿರವಿ ಅವರು ಬಿರಿಯಾನಿ ಕಥೆಯನ್ನು ಪ್ರಸ್ತಾಪ ಮಾಡಿದರು. ಈ ವೇಳೆ ಶಾಸಕರ ಕಥೆಗೆ ಸಿಎಂ ಅವರು ಖಡಕ್ ಉತ್ತರ ನೀಡಿದ ಪ್ರಸಂಗ ನಡೆಯಿತು.
ಐಎಂಎ ಕಂಪನಿ ಬಗ್ಗೆ ಈ ಹಿಂದೆಯೇ ಕಂಪ್ಲೆಂಟ್ ಬಂದಿರುತ್ತದೆ. ಆಗ ತನಿಖೆಯೂ ನಡೆಯುತ್ತದೆ. ಆ ತನಿಖೆಗೆ ಕ್ಲೀನ್ ಚಿಟ್ ಕಳುಹಿಸಿದ್ದಾರೆ. ಆ ಕ್ಲೀನ್ ಚಿಟ್ ಕೊಟ್ಟವನು ಇಂದು ಜೈಲಿನಲ್ಲಿದ್ದಾರೆ. ಆದರೆ ಯಾರ ಬಳಿ ಆಡಳಿತ ಇತ್ತೋ, ಇಂಟಲಿಜೆನ್ಸ್ ಇತ್ತೋ ಅವರೇ ಅವರನ್ನು ಯಾರು ರಕ್ಷಣೆ ಮಾಡಿದ್ದಾರೆ ಎಂದು ಸಿಟಿ ರವಿ ಪ್ರಸ್ತಾಪ ಮಾಡಿದರು.
46 ಸಾವಿರ ಬಡ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ ಪಾಪದ ಹೊಣೆ ಅವರ ಜೊತೆ ಕೂತು ಬಿರಿಯಾನಿ ತಿಂದವರ ಮೇಲಿದೆ. ಆ ಬಿರಿಯಾನಿ ತಿಂದಿದ್ದು ಯಾರು ಅನ್ನೋದನ್ನು ಅವರು ಬಾಯಿ ಬಿಟ್ಟು ಹೇಳಿದರೆ ರಾಜ್ಯ ಹಾಗೂ ದೇಶಕ್ಕೆ ಗೊತ್ತಾಗುತ್ತದೆ. ಅಂಥವರನ್ನು ತೆಗೆದುಕೊಂಡು ಹೋಗಿ ನೇಣು ಹಾಕಬೇಕು ಎಂದು ಶಾಸಕರು ಕಿಡಿಕಾರಿದರು.
ರಕ್ಷಣೆ ಮಾಡುತ್ತೇವೆ ಎಂದು ಹೇಳಬೇಕಾಗಿದ್ದು, ಆ 46 ಸಾವಿರ ಬಡ ಕುಟುಂಬವನ್ನೇ ಹೊರತು ಒಬ್ಬ ಕಳ್ಳನನ್ನು ಅಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಹೇಳಿದವರು ಯಾರು? ಅವರು ಯಾವ ಧೈರ್ಯದ ಮೇಲೆ ಹೇಳಿದ್ರು? ಸತ್ಯ ಗೊತ್ತಾಗಬೇಕಿದೆ ಎಂದು ಇದೇ ವೇಳೆ ಸಿಟಿ ರವಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಟಿ ರವಿ ಅವರು ಬಿರಿಯಾನಿ ಕಥೆಯನ್ನು ನನಗೆ ಹೇಳಿದ್ದು ಅನ್ನೋದು ಗೊತ್ತು. ಹೊರಗಡೆ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಹಾಗೂ ಆ ಬಿರಿಯಾನಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಓದಿದ್ದೇನೆ. ಐಎಂಎ ಪ್ರಕರಣದ ಇಂದಿನ ಈ ತನಿಖೆಯಲ್ಲಿ ಎಸ್‍ಐಟಿಯನ್ನು ನಾವೇ ರಚನೆ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯಂತ ಉತ್ತಮವಾದ ಕೆಲಸ ಮಾಡಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ ಎಂದರು.
ಬಿರಿಯಾನಿ ಕಥೆಗೆ ವಿವರಣೆ ನೀಡಿದ ಸಿಎಂ, ನನಗೆ ಐಎಂಎ ವ್ಯವಸ್ಥಾಕರ ಪರಿಚಯವಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ಕೃಷ್ಣಾ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ವೇಳೆ ಸಿಟಿ ರವಿ ಪ್ರಸ್ತಾಪ ಮಾಡಿದ ಶಾಸಕರು ಬಂದು ಇಫ್ತಿಯಾರ್ ಗೆ ದಯವಿಟ್ಟು ಬರಬೇಕು ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. ನಾನು ಮೊದಲನೇ ಬಾರಿಗೆ ಆ ಕಚೇರಿಗೆ ಹೋಗಿದ್ದು, ಹಾಗೆಯೇ ವ್ಯವಸ್ಥಾಪಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ನಾನೇನು ಬಿರಿಯಾನಿ ತಿಂದಿಲ್ಲ. ಯಾಕೆಂದರೆ ನನಗೆ ಎರಡನೇ ಬಾರಿಗೆ ಹೃದಯದ ಚಿಕಿತ್ಸೆ ಆದ ಬಳಿಕ ನಾನು ನಾನ್ ವೆಜ್ ತಿನ್ನೋದನ್ನು ಬಿಟ್ಟಿದ್ದೇನೆ. ಹೀಗಾಗಿ ನಾನು ಅಲ್ಲಿಗೆ ಬಿರಿಯಾನಿ ತಿನ್ನಲು ಹೋಗಿಲ್ಲ. ಅವರು ರಂಜಾನ್ ಹಬ್ಬಕ್ಕೆ ಕರೆದ್ರಲ್ವಾ ಎಂದು ಹೋಗಿ ಖರ್ಜೂರ ಬಾಯಿಗೆ ಹಾಕಿದಾಗ ಅದರ ಫೋಟೋ ತೆಗೆದಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ವಿವರಣೆ ನೀಡಿದರು.
ನನಗೆ ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿ ಸರಿಯಾದ ರೀತಿಯ ತನಿಖೆಗಳು ಆಗುತ್ತಿಲ್ಲ ಎಂಬ ವರದಿ ಬಂದ ಬಳಿಕ ನಾನೇ ನಮ್ಮ ಡಿಜಿಯವರನ್ನು ಕರೆದು ಅದರ ಬಗ್ಗೆ ತನಿಖೆ ಆಗಬೇಕು ಎಂದು ನಿರ್ದೇಶನ ಕೊಟ್ಟೆ. ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಕಂಪನಿ ಬಂದಿದ್ದಲ್ಲ, ಅದಕ್ಕಿಂತಲೂ ಮೊದಲೇ ಈ ಕಂಪನಿ ಇತ್ತು ಎಂದರು.
ವ್ಯವಸ್ಥಾಪಕ ಕಚೇರಿಯಲ್ಲಿ ದೇಶದ ಗೌರವಾನ್ವಿತ ಪ್ರಧಾನಿಗಳ ಫೋಟೋವನ್ನು ಕೂಡ ಹಾಕಿಕೊಂಡಿದ್ದರು. ಆದಾಯ ತೆರಿಗೆ ಇಲಾಖೆಯವರು ನೀಡಿದ್ದ ಫೋಟೋವನ್ನೂ ಹಾಕಿಕೊಂಡಿದ್ದರು. ಇಂದು ನಮ್ಮ ಅಧಿಕಾರಿಗಳೇ ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್ ಮಾಡಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಕೂರಿಸುವ ಬದಲು ಇಡಿಯವರು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಇಲ್ಲಿ ಬಿರಿಯಾನಿ ಕಥೆ ಯಾವುದು ನಡೆದಿಲ್ಲ. ಬಡವರ ದುಡ್ಡನ್ನು ನುಂಗಿ ಹಾಕಿದವರಿಗೆ ರಕ್ಷಣೆ ಕೊಡಲು ಈ ಸರ್ಕಾರದಲ್ಲಿ ಸಾಧ್ಯವಿಲ್ಲ. ಈ ಸಂಬಂಧ ಯಾವ ರಾಜಿನೂ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದೇ ವೇಳೆ ಸಿಎಂ ಮಾತಿಗೆ ದನಿಗೂಡಿಸಿ ಸ್ಪೀಕರ್ ನಾನ್ವೆಜ್ ತಿನ್ನೋದನ್ನು ಬಿಡಬೇಡಿ. ನಮ್ಮ ರಕ್ಷಣೆಗೆ ಬನ್ನಿ ನೀವು ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ರು.