ಪೌರತ್ವ ತಿದ್ದುಪಡಿ ಮಸೂದೆಯಿಂದ ಭಾರತದ ಮುಸ್ಲಿಮರಿಗೆ ತೊಂದರೆಯಿಲ್ಲ: ಅಹಮದ್ ಬುಖಾರಿ
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯಿಂದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ನಿರಾಶ್ರಿತರ ಮುಸ್ಲಿಮರಿಗೆ ತೊಂದರೆಯಾಗುತ್ತದೆಯೇ ಹೊರತು, ಭಾರತದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಜಾಮಿಯಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ ಈ ಕುರಿತಂತೆ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹಮದ್ ಬುಖಾರಿ ಅವರು ಮಸೂದೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ನಿರಾಶ್ರಿತರ ಮುಸ್ಲಿಮರಿಗೆ ತೊಂದರೆಯಾಗುತ್ತದೆಯೇ ವಿನಃ ಭಾರತದಲ್ಲಿರುವ ಮುಸ್ಲಿಮರಿಗಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್‌ಆರ್‌ಸಿ), ಪೌರತ್ವ (ತಿದ್ದುಪಡಿ) ಕಾಯ್ದೆಗೂ (ಸಿಎಎ) ವ್ಯತ್ಯಾಸವಿದೆ. ಸಿಎಎ ಈಗಾಗಲೇ ಕಾಯ್ದೆಯಾಗಿದೆ. ಆದರೆ, ಎನ್‌ಆರ್‌ಸಿ ಕೇವಲ ಘೋಷಣೆಯಾಗಿದೆಯೇ ಹೊರತು ಇನ್ನೂ ಕಾಯ್ದೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಅಂತೆಯೇ ‘ಪ್ರತಿಭಟನೆ ಎನ್ನುವುದು ಭಾರತೀಯರ ಹಕ್ಕು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಾಗ್ಯೂ, ಪ್ರತಿಭಟನೆಯ ಮಿತಿಯನ್ನು ತಿಳಿದಿರಬೇಕು. ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ’ ಎಂದು ಅಹಮದ್ ಬುಖಾರಿ ಹೇಳಿದ್ದಾರೆ.
ಇತ್ತ ದೆಹಲಿಯ ಸೀಲಾಂಪುರದಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, 12 ಪೊಲೀಸರು ಸೇರಿ 21 ಮಂದಿ ಗಾಯಗೊಂಡಿದ್ದಾರೆ.