ಕ್ರೈಸ್ತರು ಸಮಾಜದ ಏಳಿಗೆಗಾಗಿ ದುಡಿದವರು: ಧರ್ಮಾಧ್ಯಕ್ಷ ಡಾ. ಪೀಟರ್ ಪಾಲ್
ಮಂಗಳೂರು 🙁ಉಡುಪಿ ಟೈಮ್ಸ್ ವರದಿ) ನಾವು ಭಕ್ತಿ ಕಾರ್ಯಗಳ ಜೊತೆಗೆ ಸಮಾಜವನ್ನು ಆರಾಧನೆ ಮಾಡಬೇಕು. ದೇವರನ್ನು ಮತ್ತು ಮನುಷ್ಯರನ್ನು ಸಂಪೂರ್ಣ ನಂಬಿದವರು ಕಥೋಲಿಕರು. ಕಥೋಲಿಕ ಕ್ರೈಸ್ತರು ಸಮಾಜದ ಏಳಿಗೆಗಾಗಿ ದುಡಿದವರು. ನಾವು ಮುಖ್ಯವಾಹಿನಿಗೆ ಬಂದರೆ ಮಾತ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾಲ್ ಸಲ್ದಾನ ಹೇಳಿದರು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಮೈದಾನದಲ್ಲಿ ಭಾನುವಾರ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇವರ ಮುಂದಾಳತ್ವದಲ್ಲಿ ಭಾರತೀಯ ಕಥೊಲಿಕ್ ಯುವ ಸಂಚಲನ, ಕಥೋಲಿಕ್ ಸ್ತ್ರೀ ಮಂಡಳಿ ಸಹಯೋಗದಲ್ಲಿ ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಪ್ರಾಂತ್ಯದ ಕಥೋಲಿಕ್ ಮಹಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬೃಹತ್ ಸಮಾವೇಶವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಕೀರ್ತಿ ಕಥೋಲಿಕರದ್ದು. ಯುವ ಜನಾಂಗ ದುಶ್ಚಟಕ್ಕೆ ಬಲಿಯಾಗದೆ ಸಮಾಜದ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಮ್ಮ ಸಮಾಜ ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದೆ ಬರುವ ಅಗತ್ಯ ಇದೆ ಎಂದು ಹೇಳಿದರು.
ಮಾನವೀಯತೆಯು ನಮ್ಮ ನಂಬಿಕೆಯಾಗಿದ್ದು, ಅದು ಯೇಸುವಿನ ಕೇಂದ್ರೀಕೃತವಾಗಿದೆ. ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಅವರ ನಂಬಿಕೆಗಳನ್ನು ಸ್ವೀಕರಿಸುತ್ತೇವೆ. ಭಾರತದ ಪ್ರಜೆಗಳಾಗಿ ದೇಶವನ್ನು ಪ್ರೀತಿಸುವ ನಾವು ನಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸುತ್ತೇವೆ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸತ್ಯ ಧರ್ಮ ನ್ಯಾಯದ ನೆಲೆಯಲ್ಲಿ ದೇಶವನ್ನು ಕಟ್ಟುವ ಕಾರ್ಯವನ್ನು ಮಾಡಬೇಕಾಗಿದೆ. ವಿಭಜಿಸುವ ಶಕ್ತಿಗಳಿಗೆ ಎಂದು ಬೆಂಬಲ ನೀಡಬಾರದು. ನಾವು ವಿಶ್ವಾಸದಲ್ಲಿ ಕ್ರೈಸ್ತರಾದರೆ, ಸಂಸ್ಕೃತಿಯಲ್ಲಿ ಭಾರತೀಯರಾಗಿ ಈ ದೇಶವನ್ನು ಪ್ರೀತಿಸುವುದರೊಂದಿಗೆ ದೇಶ ಕಟ್ಟುವ ಕೆಲಸವನ್ನು ಮಾಡುತ್ತೇವೆ. ಸೇವೆಯೇ ನಮ್ಮ ಕೆಲಸವಾಗಿದೆ, ಹೊರತು ಮತಾಂತರ ಮಾಡುವುದು ನಮ್ಮ ಗುರಿಯಲ್ಲ ಎಂದು ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಖ್ಯಾತ ಉದ್ಯಮಿ ಅನಿವಾಸಿ ಭಾರತೀಯ ರೊನಾಲ್ಡ್ ಕೊಲಾಸೋ ಅವರಿಗೆ ವಿಶ್ವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾವೇಶದ ಯಶಸ್ಸಿಗೆ ಸಹಕರಿಸಿದ ಶಾಸಕ ಹರೀಶ್ ಪೂಂಜಾ ಹಾಗೂ ಇನ್ನಿತರ ದಾನಿಗಳನ್ನು ಸನ್ಮಾನಿಸಲಾಯಿತು. ಸರಕಾರಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದತ್ತ ಯುವಜನರು, ಅಪರಾಧ ಯುವಜನತೆ ಮಾದಕ ವಸ್ತುಗಳು, ಜಾಲತಾಣದ ಬಳಕೆಯ ಹತೋಟಿ, ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ನೀನಾಸಂ ಕಲಾವಿದರಿಂದ ಕೃಿಸ್ಟಿ ನಾಟಕ ಪ್ರದರ್ಶನ ನಡೆಯಿತು. ಸಮಾವೇಶಕ್ಕೂ ಮೊದಲು ಉದ್ಯಮಿ ರೊನಾಲ್ಡ್ ಕುಲಾಸೊ ಧ್ವಜಾರೋಹಣ ನೆರವೇರಿಸಿದರು.
ನೂರಾರು ಧರ್ಮಗುರುಗಳು, ಧರ್ಮಭಗಿನಿಯರು ಸೇರಿದಂತೆ ಮೂವತ್ತು ಸಾವಿರಕ್ಕೂ ಅಧಿಕ ಕಥೋಲಿಕ ಕ್ರೈಸ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶಕ್ಕೂ ಮೊದಲು ಮಡಂತ್ಯಾರು ಪೇಟೆಯಿಂದ ಸಮಾವೇಶದ ಮೈದಾನದವರೆಗೆ ಶಿಸ್ತುಬದ್ಧ ಬೃಹತ್ ಮೆರವಣಿಗೆ ನಡೆಯಿತು.
ಸಮಾವೇಶದ ಅಧ್ಯಕ್ಷತೆಯನ್ನು ಮಂಗಳೂರು ಕಥೋಲಿಕ್ ಸಭಾ ಅಧ್ಯಕ್ಷರಾದ ಪೌಲ್ ರೋಲ್ಫಿ ಡಿಕೋಸ್ತಾ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕೆ ಹರೀಶ್ ಕುಮಾರ್, ಮಾಜಿ ಶಾಸಕ ಜೆ ಆರ್ ಲೋಬೋ, ಲೋಕಸೇವಾ ಆಯೋಗದ ಸದಸ್ಯ ಡಾ. ರೊನಾಲ್ಡ್ ಫರ್ನಾಂಡಿಸ್, ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ ಹರ್ಷ, ಅಖಿಲ ಭಾರತ ಕಥೋಲಿಕ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಲ್ಯಾನ್ಸಿ ಡಿಕುನ್ನಾ, ಉಡುಪಿ ಕೆಥೋಲಿಕ್ ಸಭಾ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಐಸಿವೈಎಂ ರಾಜ್ಯಾಧ್ಯಕ್ಷ ಜೈಸನ್ ಪಿರೇರಾ ಸಹಿತ ವಿವಿಧ ಧರ್ಮಗುರುಗಳು ಉಪಸ್ಥಿತರಿದ್ದರು.
ಸಮಾವೇಶದ ಸಂಚಾಲಕರಾದ ಜೋಯೆಲ್ ಮೆಂಡೋನ್ಸಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕಾರ್ಯದರ್ಶಿ ವಾಲ್ಟರ್ ಮೋನಿಸ್ ವಂದಿಸಿದರು. ವಿವೇಕ್ ಪಾಯಸ್ ಹಾಗೂ ಫ್ರಾನ್ಸಿಸ್ ವಿವಿ ಕಾರ್ಯಕ್ರಮ ನಿರೂಪಿಸಿದರು.