ಸಂಸ್ಕಾರಯುತ ಶಿಕ್ಷಣ ಮಕ್ಕಳಿಗೆ ಅಗತ್ಯ: ಮುಖ್ಯಮಂತ್ರಿ ಯಡಿಯೂರಪ್ಪ

ಉಡುಪಿ: ಮಕ್ಕಳು ಸತ್ಪ್ರಜೆಗಳಾಗಳು ಸಂಸ್ಕಾರಯುತ ಶಿಕ್ಷಣವು ಅತೀ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅವರು ಉಡುಪಿ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ಚಿಣ್ಣರ ಮಾಸೋತ್ಸವ ಹಾಗೂ  ಸ್ವಚ್ಛ ಭಾರತ ಅಭಿಯಾನದಡಿ ಎಂ.ಆರ್.ಪಿ.ಎಲ್. ಸಂಸ್ಥೆಯ ರೂ. 2 ಕೋಟಿ ಅನುದಾನದಿಂದ ನಿರ್ಮಾಣಗೊಂಡಿರುವ ಶೌಚಾಲಯ ಸಮುಚ್ಚಯ ಉದ್ಘಾಟಿಸಿ ಮಾತನಾಡಿದರು.

 ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲಗಳಾಗದೆ  ಭತ್ತವನ್ನು ಬೆಳೆಯುವ ಗದ್ದೆಗಳಾಗಬೇಕು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಮಕ್ಕಳು ಶುದ್ಧ ಪರಿಸರದಲ್ಲಿ ಆರೋಗ್ಯಯುತರಾಗಿ ಬಾಳಬೇಕು. ಉಡುಪಿ ಕೃಷ್ಣ ಮಠವು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ರಾಜ್ಯ ಸರಕಾರ ಬಿಸಿಯೂಟ ಯೋಜನೆ ಜಾರಿಗೆ ತರುವ ಮೊದಲೇ ಕೃಷ್ಣ  ಮಠವು ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ, ಸುಮಾರು 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿನಿತ್ಯ ಬಿಸಿಯೂಟ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

 ಸ್ವಚ್ಛ ಭಾರತ ಯೊಜನೆಗೆ ಕೃಷ್ಣ ಮಠದ ಕೊಡುಗೆ ಅಪಾರವಾಗಿದೆ. ಇದು ದೇಶಕ್ಕೆ ಮಾದರಿ ಎಂದು ಮುಖ್ಯಮಂತ್ರಿ ನುಡಿದರು.  ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ,  ಶಾಸಕರಾದ ರಘುಪತಿ ಭಟ್ ಸುನಿಲ್ ಕುಮಾರ್,  ಜಿಲ್ಲಾಧಿಕಾರಿ ಜಗದೀಶ್, ಎಂ.ಆರ್.ಪಿ.ಎಲ್.  ಸಂಸ್ಥೆಯ ಅಧಿಕಾರಿ ವೆಂಕಟೇಶ್ ಮತ್ತಿತರರು ಇದ್ದರು.
ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.

Leave a Reply

Your email address will not be published. Required fields are marked *

error: Content is protected !!