ಚಿಕ್ಕಮಗಳೂರು: ಶರಣಾಗತರಾದ ನಕ್ಸಲರ ಶಸ್ತ್ರಾಸ್ತ್ರಗಳು ವಶಕ್ಕೆ
ಚಿಕ್ಕಮಗಳೂರು: ಕಳೆದ ಬುಧವಾರ ಆರು ನಕ್ಸಲರು ಶರಣಾಗತರಾದ ಬೆನ್ನಲ್ಲೇ ಪೊಲೀಸರು ಅರಣ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಪ್ಪ ತಾಲ್ಲೂಕಿನ ಜಯಪುರ ವ್ಯಾಪ್ತಿಯ ಕಿತ್ತಲೆಗುಳಿ ಬಳಿಯ ಅರಣ್ಯದಲ್ಲಿ ಆರು ಬಂದೂಕು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಎ.ಕೆ-56, ಮೂರು 303 ರೈಫಲ್, 12 ಬೋರ್ ಎಸ್ ಬಿಬಿಎಲ್, ಒಂದು ಸ್ವದೇಶ ನಿರ್ಮಿತ ಬಂದೂಕು ಪತ್ತೆಯಾಗಿದೆ.
7.62 ಎಂಎಂ ಎ.ಕೆ. ಮದ್ದುಗುಂಡು-11, 303- ರೈಫಲ್ ಮದ್ದುಗುಂಡು -133, 12 ಬೋರ್ ಕಾರ್ಟ್ರಿಡ್ಜಸ್ – 24, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು – 8 ಸೇರಿ ಒಟ್ಟು 176 ಮದ್ದುಗುಂಡು, ಎ.ಕೆ-56 ಖಾಲಿ ಮ್ಯಾಗ್ಜಿನ್ – 01 ಸಿಕ್ಕಿವೆ. ಈ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಆರು ಮಂದಿ ನಕ್ಸಲರು ಜ.8ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಿದ್ದಾರೆ.
‘ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿ’ ಹಾಗೂ ‘ಶಾಂತಿಗಾಗಿ ನಾಗರಿಕ ವೇದಿಕೆ’ ಸದಸ್ಯರ ನೇತೃತ್ವದಲ್ಲಿ ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿಗೆ ಬುಧವಾರ ಸಂಜೆ ವೇಳೆ ಆಗಮಿಸಿದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ. ವಸಂತ್ ಹಾಗೂ ಟಿ.ಎನ್.ಜೀಶ್ ರಾಜ್ಯ ಸರಕಾರದ ಮುಂದೆ ಶರಣಾಗಿದ್ದಾರೆ.