ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ್’:ನೆಲ ಸ್ಪರ್ಶದ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತ
ಬೆಂಗಳೂರು: ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ್’ ಶನಿವಾರ ಬೆಳಗಿನಜಾವ 1.55ಕ್ಕೆ ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು.
ಇದರಿಂದ ಈ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬ ಬಗ್ಗೆ ವಿಕ್ರಮ್ ಲ್ಯಾಂಡರ್‌ನಿಂದ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಕೊನೆ ಹಂತದಲ್ಲಿ ಲ್ಯಾಂಡರ್ ಪಥ ಬಿಟ್ಟು ಇಳಿಯಲಾರಂಭಿಸಿತು. ಬಳಿಕ ಏನಾಯಿತು ಎಂಬುದು ಮಿಷನ್ ಕಂಟ್ರೋಲ್‌ಗೆ ಮಾಹಿತಿ ಸಿಗಲಿಲ್ಲ. ಇದರಿಂದ ಇಸ್ರೊ ವಿಜ್ಞಾನಿಗಳು ಆತಂಕಕ್ಕೆ ಒಳಗಾದರು.
ವಿಕ್ರಮ್ ನಿಂದ ಮಾಹಿತಿಗಾಗಿ ಬಹಳ ಹೊತ್ತು ಕಾಯಲಾಯಿತು. ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರು ಪ್ರಧಾನಿ ಮೋದಿ ಬಳಿಗೆ ಬಂದು ಮಾಹಿತಿ ನೀಡಿದ ಬಳಿಕ ಅಲ್ಲಿಂದ ತೆರಳಿದರು.
ವಿಜ್ಞಾನಿಗಳ ಮುಖ ಕಳಾಹೀನವಾಗಿತ್ತು. ಪ್ರಧಾನಿ ಮೋದಿ ವಿಜ್ಞಾನಿಗಳಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಹೇಳಿದರು.
2.1 ಕಿ.ಮೀ. ಎತ್ತರದಲ್ಲಿರಬೇಕಾದರೆ ಸಂಪರ್ಕ ಕಡಿತ
1.38ಕ್ಕೆ ಲ್ಯಾಂಡರ್ ಚಂದ್ರನ ಮೇಲ್ಮೈಯತ್ತ ಇಳಿಯಲು ಪ್ರಾರಂಭಿಸಿತು. 1.48 ಗಂಟೆಗೆ ಮೇಲ್ಮೈಯಿಂದ 6 ಕಿ.ಮೀ. ಎತ್ತರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷ ಕಳೆದಿಕೊಂಡಿತು. ಆದರೆ 1.50ರ ವೇಳೆಗೆ ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆ, ನೌಕೆಯೊಂದಿಗಿನ ಸಂಪರ್ಕ ಕಡಿತಗೊಂಡಿತು. ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ತಕ್ಷಣ ವಿಜ್ಞಾನಿಗಳ ಆತಂಕಕ್ಕೆ ಒಳಗಾದರು. ಆಗ 1.55 ನಿಮಿಷ ಆಗಿತ್ತು. ಇದನ್ನು 2.17 ಗಂಟೆಗೆ ಶಿವನ್ ಪ್ರಕಟಿಸಿದರು. ಅಲ್ಲಿವರೆಗೆ ಪ್ರತಿ ಹಂತದ ಯಶಸ್ಸನ್ನು ಅವರು ಸಂಭ್ರಮಿಸಿದರು.ಟ್ರಾಜೆಕ್ಟರಿಯ ತನ್ನ ರೇಖೆ ಬಿಟ್ಟು ಹೊರ ಹೋದ ಕ್ಷಣ
ವಿಕ್ರಮ್‌ಗೆ ಏನಾಯಿತು ಎಂಬ ಮಾಹಿತಿ ತಕ್ಷಣ ಲಭ್ಯವಿಲ್ಲದ ಕಾರಣ ಅದರ ಕಥೆ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಅದು ಎಲ್ಲಿ ಲ್ಯಾಂಡ್ ಆಗಬೇಕು ಎಂಬ ಗುರಿ ಇತ್ತೋ ಅಲ್ಲಿ ಇಳಿಯಲಿಲ್ಲ. ಆದರೆ, ಆರ್ಬಿಟರ್ ಉತ್ತಮವಾಗಿ ಪರಿಭ್ರಮಣ ನಡೆಸುತ್ತಿದೆ.
ಲ್ಯಾಂಡರ್ ಅಥವಾ ಆರ್ಬಿಟರ್‌ನಿಂದ ಮಾಹಿತಿ ಬಂದ ನಂತರ ಅದನ್ನು ವಿಶ್ಲೇಷಣೆ ಮಾಡಿದ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.
ವಿಕ್ರಮ್ ಅವರೋಹಣದ ಕೊನೆಯ 15 ನಿಮಿಷ ತೀವ್ರ ಆತಂಕ ಹುಟ್ಟಿಸಿತ್ತು, ಲ್ಯಾಂಡರ್ ಟ್ರಾಜೆಕ್ಟರಿಯಿಂದ ಹೊರಗೆ ಸರಿದ ತಕ್ಷಣವೇ ನಿಯಂತ್ರಣ ಕೇಂದ್ರದಲ್ಲಿ ಗಾಢ ಮೌನ ನೆಲೆಸಿತ್ತು.
ವಿಕ್ರಮ್‌ನಿಂದ ಸಂದೇಶ ಬರದಾದ ಬಳಿಕ ತಮ್ಮ ಬಳಿಗೆ ಬಂದ ಇಸ್ರೊ ಅಧ್ಯಕ್ಷ ಕೆ.ಶಿವನ್ ಅವರನ್ನು ಪ್ರಧಾನಿ ನರೇಂದ್ರ ಮೊದಿ ಬೆನ್ನು ಚಪ್ಪರಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ಅಧ್ಯಯನ ನಡೆಸಲಾಗುತ್ತಿದೆ: ಕೆ.ಶಿವನ್
“2.1 ಕಿ.ಮೀ.ವರೆಗೆ ಲ್ಯಾಂಡರ್ ಇಸ್ರೊ ಸಂಪರ್ಕದಲ್ಲೇ ಇತ್ತು. ಬಳಿಕ ಅದರ ಸಂಪರ್ಕ ತಪ್ಪಿದೆ. ಏನು ನಡೆದಿದೆ ಎಂಬುದನ್ನು ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್ 2 ಗಂಟೆ 17 ನಿಮಿಷಕ್ಕೆ ಪ್ರಕಟಿಸಿದರು.
ಧೈರ್ಯದಿಂದ ಮುನ್ನುಗ್ಗೋಣ: ಮೋದಿ
ವಿಜ್ಞಾನ ಮತ್ತು ಮಾನವ ಜನಾಂಗದ ಅಭ್ಯುಧಯಕ್ಕೆ ನೀವು ಉತ್ತಮ ಸೇವೆ ಸಲ್ಲಿಸಿದ್ದೀರಿ. ನಾವು ಕಲಿಯುತ್ತಿದ್ದೇವೆ. ನಮ್ಮ ಪ್ರಯತ್ನ ಮುಂದುವರಿಸೋಣ. ಧೈರ್ಯದಿಂದ ಮುನ್ನುಗ್ಗೋಣ. ನಾನು ಸದಾ ನಿಮ್ಮ ಜತೆಗಿದ್ದೇನೆ. ಸಂಪರ್ಕ ಸದ್ಯ ಸಾಧ್ಯವಾಗಿಲ್ಲ, ಆದರೆ ಭರವಸೆಯಿಂದ ನಿರೀಕ್ಷಿಸೋಣ.