ಮಡಿಕೇರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಮಡಿಕೇರಿ – ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್‌ಕ್ರಾಸ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ರಾಷ್ಟ್ರಪ್ರೇಮ ಹೊಂದಿರಬೇಕು ಎಂದು ಅವರು ಕರೆ ನೀಡಿದರು. ಪ್ರತಿಯೊಬ್ಬರೂ ಅಭಿವೃದ್ಧಿಯತ್ತ ಚಿಂತನೆ ಮಾಡಿದಾಗ ರಾಷ್ಟ್ರವೂ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಇರಬೇಕು. ಕಾರ್ಗಿಲ್ ಯುದ್ದದಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸದಾ ಸ್ಮರಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ದದಲ್ಲಿ ವೀರ ಮರಣ ಹೊಂದಿದ ಯೋಧರ ಒಂದೊಂದು ಬದುಕು ರೋಚಕವಾಗಿದೆ. ಯೋಧರು ಗಡಿ ಕಾಯುವುದರಿಂದ ನಾವುಗಳು ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವಾಗಿದೆ. ರಾಷ್ಟ್ರದ ಸುರಕ್ಷತೆ, ಭದ್ರತೆ ಕಾಯುವಲ್ಲಿ ಸೈನಿಕರ ಪಾತ್ರ ಮಹತ್ತರವಾಗಿದೆ ಎಂದು ಅವರು ಹೇಳಿದರು.
ಪ್ರಪಂಚದ ಯಾವುದೇ ದೇಶದಲ್ಲಿ ಭಾರತದ ಕಾರ್ಗಿಲ್ ಅಂತಹ ರಣರಂಗವಿರಲಾರದು. ಪ್ರಾಣದ ಹಂಗನ್ನು ತೊರೆದು ದೇಶಕ್ಕಾಗಿ ಪ್ರಾಣಾರ್ಪಾಣೆ ಮಾಡಿದ ವೀರ ಯೋಧರನ್ನು ಕೊಂಡಾಡಿದರು.
ಅಂತಹ ಭೀಕರ ರಣರಂಗದಲ್ಲಿ ನಮ್ಮ ದೇಶದ ವೀರ ಸೇನಾನಿಗಳ ಪ್ರಾಣಾರ್ಪಣೆಯ ಫಲವಾಗಿ ಜೀವನ ನಡೆಸುತ್ತಿದ್ದೇವೆ. ಅಂತಾಹ ವೀರರನ್ನು ನೆನೆಯುವುದು ಭಾರತೀಯರಾದ ನಮ್ಮ ಕರ್ತವ್ಯ. ಎಲ್ಲಾ ಯುವ ಸಮೂಹ ಇಂದು ದೇಶಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ದಯಾನಂದ.ಕೆ.ಸಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಜನರಲ್ಲಿ ದೇಶಾಭಿಮಾನ ಕುಸಿಯುತ್ತಿದೆ, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮದ ಅರಿವು ಮೂಡಿಸುವುದು ಅನಿವಾರ್ಯ. ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಸಹಾಯಕ ಪ್ರಾಧ್ಯಾಪಕರಾದ ಪ್ರಕಾಶ್ ಅವರು ಮಾತನಾಡಿ ದೇಶಕ್ಕಾಗಿ ಹಲವು ಸೈನಿಕರು ಹೋರಾಟ ಮಾಡಿ ವೀರ ಮರಣವನ್ನಪ್ಪಿದ್ದಾರೆ. ಇವರನ್ನು ಸದಾ ಸ್ಮರಿಸಬೇಕಿದೆ ಎಂದು ಅವರು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಪ್ರೊ.ಚಿತ್ರಾ.ವೈ ಅವರು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಪ್ರಸಾದ್ ಮತ್ತಿತರರು ಹಾಜರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ಪ್ರವೀಣ್ ನಿರೂಪಿಸಿದರು. ಆಕೇಶ ಸ್ವಾಗತಿಸಿದರು. ಶಿವ ಪ್ರಾರ್ಥಿಸಿ, ರೋಷನ್ ವಂದಿಸಿದರು.