ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಅನಾಹುತ
ಮಡಿಕೇರಿ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದೆ. ನಿಲ್ದಾಣದ ಮೇಲ್ಭಾಗದ ಆರ್ಸಿಸಿಯ ದೊಡ್ಡ ಗಾತ್ರದ ಸಿಮೆಂಟ್ ಪದರವೊಂದು ಶಿಥಿಲಗೊಂಡು ಕೆಳಗೆ ಬಿದ್ದ ಪರಿಣಾಮ ಗ್ರಾನೈಟ್ ಕಲ್ಲಿನ ಬೆಂಚು ಮುರಿದು ಬಿದ್ದಿದೆ.
ಇದ್ದಕ್ಕಿದ್ದಂತೆ ಈ ಘಟನೆ ಸಂಭವಿಸಿದ್ದರಿಂದ ಪ್ರಯಾಣಿಕರು ಆತಂಕಗೊಂಡು ಜಾಗ ಖಾಲಿ ಮಾಡಿದರು. ಸಿಮೆಂಟ್ ಪದರ ಬೀಳುವ ಕೆಲವೇ ನಿಮಿಷಗಳ ಮೊದಲು ಬೆಂಚಿನಲ್ಲಿ ಕುಳಿತ್ತಿದ್ದ ಪ್ರಯಾಣಿಕರು ಬೇರೆಡೆ ಸ್ಥಳಾಂತರಗೊಂಡಿದ್ದರಿಂದ ಸಾವು, ನೋವುಗಳು ಸಂಭವಿಸಿಲ್ಲವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಬಸ್ ನಿಲ್ದಾಣದ ಕೆಲವು ಭಾಗಗಳನ್ನು ಲಕ್ಷಾಂತರ ರೂ.ಖರ್ಚು ಮಾಡಿ ದುರಸ್ತಿ ಪಡಿಸಲಾಗಿತ್ತು. ನೆಲಕ್ಕೆ ಗ್ರಾನೈಟ್ ಕಲ್ಲುಗಳನ್ನು ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಮೇಲ್ಚಾವಣಿ ಶಿಥಿಲಗೊಂಡಿರುವುದನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಗಮನಿಸದೆ ಇರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.