ನೊಟ್ ಬ್ಯಾನ್ ಆದಾಗ ಅಕ್ರಮವೆಸಗಿದ್ದೀರಾ? ನಿಮಗೆ ಕಾದಿದೆ ನೋಡಿ ಆಪತ್ತು!
ನವದೆಹಲಿ: ಅಪನಗದೀಕರಣ ಜಾರಿಯಾಗಿ ಮೂರು ವರ್ಷಗಳಾಗುತ್ತಾ ಬಂದಿದ್ದರೂ, ಆ ವೇಳೆ ಅಕ್ರಮ ನಡೆಸಿದವರ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಆದಾಯ ತೆರಿಗೆ ಇಲಾಖೆ ಇನ್ನೂ ಬಿಟ್ಟಿಲ್ಲ. ನೋಟ್ಬಂದಿ ವೇಳೆ ಭಾರಿ ಪ್ರಮಾಣದ ಅಕ್ರಮ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿರುವವರ ಪತ್ತೆಗಾಗಿ 17 ಅಂಶಗಳ ‘ಚೆಕ್ಲಿಸ್ಟ್’ನೊಂದಿಗೆ ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. ಈ ಪಟ್ಟಿಯನ್ನು ಈಗಾಗಲೇ ದೇಶಾದ್ಯಂತ ಇರುವ ತೆರಿಗೆ ಆಯುಕ್ತರಿಗೆ ರವಾನೆ ಮಾಡಿದೆ.
ಅಪನಗದೀಕರಣದ ವೇಳೆ ಅಕ್ರಮ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚುವುದರ ಜತೆಗೆ ಮೇಲ್ನೋಟಕ್ಕೆ ಏನೂ ಆಗಿಯೇ ಇಲ್ಲ ಎಂಬಂತೆ ತಿಳಿದುಬಂದಿರುವ ಪ್ರಕರಣಗಳ ವಿಚಾರದಲ್ಲಿ ಮತ್ತಷ್ಟುಅಧ್ಯಯನ ನಡೆಸುವ ಯತ್ನವಾಗಿದೆ.
ಚೆಕ್ಲಿಸ್ಟ್ನಲ್ಲಿ ಏನಿದೆ?:
2016ರ ನ.9ರಿಂದ 2016ರ ಡಿ.31ರವರೆಗೆ ಅಕ್ರಮ ಹಣ ಜಮೆ ಮಾಡಿದ ಎಲ್ಲ ಪ್ರಕರಣಗಳನ್ನೂ ಪರಿಶೀಲಿಸಬೇಕು. ತೆರಿಗೆದಾರರು ಇಲಾಖೆ ನೀಡಿದ ಹಣದ ವಿವರದ ಬಗ್ಗೆ ಆಕ್ಷೇಪ ಎತ್ತಿದರೆ, ಬ್ಯಾಂಕಿನಲ್ಲಿ ಪರಿಶೀಲಿಸಿ ನಿಖರ ಮೊತ್ತವನ್ನು ನಮೂದಿಸಬೇಕು. ತೆರಿಗೆ ಪಾವತಿ, 2016-17ನೇ ಸಾಲಿನಲ್ಲಿದ್ದ ಒಟ್ಟಾರೆ ಆದಾಯ, ನಿವ್ವಳ ಆದಾಯ, ಜಮೆ ಮಾಡಲಾದ ಹಣ ನಿವ್ವಳ ಆದಾಯದಲ್ಲಿ ಶೇಕಡಾವಾರು ಎಷ್ಟುಪ್ರಮಾಣದಲ್ಲಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ತೆರಿಗೆ ಇಲಾಖೆಯು ಆಯುಕ್ತರಿಗೆ ನೀಡಿರುವ ಪಟ್ಟಿಯಲ್ಲಿ ಹೇಳಿದೆ.