ಕದ್ದು ಮುಚ್ಚಿ ಮದ್ಯ ಮಾರಾಟ ಮಾಡಿದರೆ ಲೈಸನ್ಸ್ ರದ್ದು
ಕೋಲಾರ: ‘ರಾಜ್ಯದೆಲ್ಲೆಡೆ ಮದ್ಯದಂಗಡಿಗಳಲ್ಲಿ ಮದ್ಯದ ದಾಸ್ತಾನಿನ ಪರಿಶೀಲನೆ ಮಾಡಿ ವ್ಯತ್ಯಾಸ ಕಂಡುಬಂದರೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಮದ್ಯದಂಗಡಿ ಮಾಲೀಕರೇ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಈ ಅಕ್ರಮಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಲಾಕ್‌ಡೌನ್ ಜಾರಿಗೂ ಮುನ್ನ ಮದ್ಯದಂಗಡಿಗಳಲ್ಲಿದ್ದ ಮದ್ಯದ ದಾಸ್ತಾನಿನ ವಿವರವನ್ನು ದಾಖಲೆ ಪುಸ್ತಕದಲ್ಲಿ ನಮೂದು ಮಾಡಿ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿತ್ತು. ದಾಖಲೆ ಪುಸ್ತಕದಲ್ಲಿನ ವಿವರ ಮತ್ತು ಸದ್ಯ ದಾಸ್ತಾನಿರುವ ಮದ್ಯದ ಪ್ರಮಾಣವನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮದ್ಯದ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದರೆ ಮುಲಾಜಿಲ್ಲದೆ ಅಂಗಡಿಯ ಲೈಸನ್ಸ್ ರದ್ದು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.