ಇಂದ್ರಾಣಿ ನದಿ ಉಳಿವಿಗೆ ಅಭಿಯಾನ
ಉಡುಪಿ: ಇಂದ್ರಾಣಿ(ಇಂದ್ರಾಳಿ) ನದಿ ನಗರೀಕರಣ ದುಷ್ಪರಿಣಾಮಕ್ಕೆ ಸಿಲುಕಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ತ್ಯಾಜ್ಯ ಎಸೆಯುವುದು, ಕೊಳಚೆ ನೀರು ಹರಿಸುವ ಮೂಲಕ ಇಂದ್ರಾಣಿಯನ್ನು ಅಸಹನೀಯಗೊಳಿಸಲಾಗಿದೆ. ಜನಪ್ರತಿನಿಧಿಗಳು, ಸಾರ್ವಜನಿಕರು, ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಲುಷಿತಗೊಂಡ ಇಂದ್ರಾಣಿ ತೀರ್ಥದ ಶುದ್ಧೀಕರಣಕ್ಕೆ ಪ್ರಸ್ತುತ ಸಮಾನ ಮನಸ್ಕರ ಅಭಿಯಾನ ಆರಂಭಗೊಂಡಿದೆ.
ಇಂದ್ರಾಣಿ ನದಿ ಉಳಿಸಲೇ ಬೇಕು ಎಂಬ ದೃಢ ನಿರ್ಧಾರದಿಂದ ಉಭಯ ಜಿಲ್ಲೆಗಳ ಸಮಾನ ಮನಸ್ಕ ಪರಿಸರ ಆಸಕ್ತರು, ವಿವಿಧ ಸಂಘ, ಸಂಸ್ಥೆಗಳು, ವಿಜ್ಞಾನಿಗಳು, ಸಂಶೋಧಕರು, ಶಿಕ್ಷಕರು, ಉಡುಪಿ ಯುವ ಸಂಘಟನೆಗಳವರು ಒಂದುಗೂಡಿದ್ದಾರೆ. ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ನದಿ ಉಳಿಸುವ ಬಗ್ಗೆ ಹಂತ ಹಂತವಾಗಿ ಹೋರಾಟ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಜುಲೈ 28ರಂದು ಬೆಳಗ್ಗೆ 9 ಗಂಟೆಗೆ ಇಂದ್ರಾಣಿ ನದಿ ಉಗಮವಾಗುವ ಇಂದ್ರಾಳಿ ದೇವಸ್ಥಾನದ ಬಳಿ ಬೃಹತ್ ಜಾಥಾ ಆರಂಭವಾಗಲಿದೆ. ಇಂದ್ರಾಣಿ ತೀರ್ಥ ಹರಿಯುವ ತೋಡಿನಲ್ಲಿ ಇಂದು ನಗರಸಭೆ ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿದೆ. ನಗರ ಸಭಾ ವ್ಯಾಪ್ತಿಯ ಇಂದ್ರಾಳಿ ಬಳಿಯಿಂದ ಮೂರು ಝರಿಗಳು ಒಂದಾಗಿ ಬೀಡಿನಗುಡ್ಡೆ, ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಹಿಂಭಾಗದಿಂದ ಹರಿದು ಕಲ್ಮಾಡಿಯಲ್ಲಿ ಸಮುದ್ರ ಸೇರುತ್ತಿರುವ ನೀರಿನ ಸೆಲೆಯೇ ಇಂದ್ರಾಣಿ ತೀರ್ಥ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಇತಿಹಾಸದಲ್ಲಿ ಉಲ್ಲೇಖವಾಗಿದೆ. 15 ವರ್ಷದ ಹಿಂದೆ ಈ ನೀರನ್ನು ಹಲವು ಕುಟುಂಬಗಳು ದಿನ ಬಳಕೆ ಮಾಡುತಿದ್ದರು.
ಇದೇ ನೀರನ್ನು ನಂಬಿಕೊಂಡು ಅನೇಕ ಕುಟುಂಬಗಳು ಕೃಷಿ ಚಟುವಟಿಕೆ ಕೂಡ ಮಾಡುತ್ತಿದ್ದರು. ಕಾಲಾನಂತರ ನಗರಸಭೆ ಕೊಳಚೆ ನೀರು ಮತ್ತು ಒಳಚರಂಡಿ ನೀರು ,ಶ್ರೀಕೃಷ್ಣ ಮಠದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ ನೇರವಾಗಿ ಇದೇ ತೋಡಿಗೆ ಬಿಡಲು ಆರಂಭಿಸಿದರು. ಮಳೆಗಾಲದಲ್ಲಿ ಶುದ್ಧವಾಗಿ ಹರಿಯುವ ಇಂದ್ರಾಣಿ ತೀರ್ಥ ನವೆಂಬರ್ ನಂತರ ಕಲುಷಿತವಾಗುತ್ತದೆ. ಇಂದ್ರಾಳಿಯಿಂದ ಕಲ್ಮಾಡಿ ತನಕ ಸಾವಿರಾರು ಕುಟುಂಬ ಈ ತೋಡಿನ ಎರಡು ಭಾಗದಲ್ಲಿ ವಾಸವಾಗಿವೆ. ಬೀಡಿನ ಗುಡ್ಡೆಯ ತನಕ ಕೊಳಚೆ ನೀರು ತೋಡಿಗೆ ಬಿಡುವುದಿಲ್ಲ. ಕಲ್ಸಂಕ ಸಮೀಪಿಸುತ್ತಿದ್ದಂತೆ ಕೊಳಚೆ ನೀರನ್ನು ನೇರವಾಗಿ ಈ ತೋಡಿಗೆ ಬಿಡಲಾಗುತ್ತದೆ. ಮಾತ್ರವಲ್ಲದೆ ಒಳಚರಂಡಿ ನೀರು ಕೂಡ ಯಾವುದೇ ಅಡೆ ತಡೆ ಇಲ್ಲದೇ ಈ ತೋಡಿನಲ್ಲಿ ಹರಿದು ಬರುತ್ತಿದೆ.
ಕೊಳಕಾದ ಬಾವಿ ನೀರು: ನಗರಸಭೆ ಕೊಳಚೆ ನೀರು ಹಾಗೂ ಒಳಚರಂಡಿ ನೀರು ನೇರವಾಗಿ ಕಲ್ಸಂಕ ತೋಡಿಗೆ ಬಿಡುವುದರಿಂದ ಈ ತೋಡಿನ ಎರಡು ಭಾಗದಲ್ಲಿರುವ ಮನೆಯ ಬಾವಿಯ ನೀರು ಸಂಪೂರ್ಣ ಹಾಳಾಗಿದೆ. 100ಕ್ಕೂ ಹೆಚ್ಚು ಮನೆಯ ಬಾವಿಗಳು ಪಾಳು ಬಿದ್ದಿವೆ. ಕಲ್ಸಂಕದಿಂದ ಹಿಡಿದು ಕಲ್ಮಾಡಿಯ ತನಕ ತೋಡಿನ ಎರಡು ಭಾಗದ ಜನರಿಗೆ ನಿತ್ಯ ಸೊಳ್ಳೆ ಕಾಟ ತಪ್ಪಿದ್ದಲ್ಲ. ನಗರ ಪ್ರದೇಶದ ನಿಟ್ಟೂರು ಭಾಗದ ಜನರಲ್ಲಿ ಡೆಂಗ್ಯೂ ಕಾಣಿಸಿಕೊಳ್ಳಲು ಇದು ಪ್ರಮುಖ ಕಾರಣವಾಗಿದೆ.
ಇಂದ್ರಾಣಿ ನದಿ ಮತ್ತೆ ಮೂಲ ಸ್ವರೂಪಕ್ಕೆ ಬಂದರೆ ಬೇಸಿಗೆಯಲ್ಲಿ ನಗರದ ಅರ್ಧದಷ್ಟು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ನದಿ ಉಳಿವಿಗಾಗಿ ಜನಜಾಗೃತಿ ಜತೆಗೆ ಕಾನೂನಾತ್ಮಕ ಹೋರಾಟ ನಡೆಸಲಿದ್ದೇವೆ. ಮೊದಲಿಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಲಿದ್ದೇವೆ. ಆಶಯ ಈಡೇರದಿದ್ದಲ್ಲಿ ನಮ್ಮ ನಡೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಹಸಿರು ಪೀಠ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು.
ಶ್ರೀಕಾಂತ್ ಶೆಟ್ಟಿ,
ಇಂದ್ರಾಳಿ ಉಳಿಸಿ ಅಭಿಯಾನ ಸಂಚಾಲಕ