ಪೊಲೀಸರ ವೇತನ, ಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ?
ಬೆಂಗಳೂರು: ಪೊಲೀಸ್ ವೇತನ, ಭತ್ಯ ಪರಿಷ್ಕರಿಸುವ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ವರದಿಗೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. ಆಗಸ್ಟ್ 1 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಗೆ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಪರಿಷ್ಕೃತ ವೇತನ ಎಂದಿನಿಂದ ಅಧಿಕೃತವಾಗಿ ಜಾರಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧು ಸ್ವಾಮಿ, ಔರಾದ್ಕರ್ ವರದಿಯಂತೆ ವೇತನ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದರೆ ಜುಲೈ 16 ರಂದು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಆದೇಶದಂತೆ ಆಗಸ್ಟ್ 1ರಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆಯಾಗಲಿದೆ .
ಆದರೆ, ಪರಿಷ್ಕೃತ ವೇತನ ಎಂದಿನಿಂದ ಅನುಷ್ಠಾನಗೊಳ್ಳಲಿದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಹೀಗಾಗಿ ಪರಿಷ್ಕೃತ ವೇತನ ಪಡೆಯಲು ಪೊಲೀಸರು ಇನ್ನೂ ಕೆಲ ತಿಂಗಳು ಕಾಯಬೇಕಾಗಬಹುದು. ಔರಾದ್ಕರ್ ಸಮಿತಿ ವರದಿ ಜಾರಿಯಿಂದಾಗಿ ರಾಜ್ಯ ಸರ್ಕಾರಕ್ಕೆ ಅಂದಾಜು 386.26 ಕೋಟಿ ರೂ ಹೊರೆ ಬೀಳಲಿದೆ.
ಔರಾದ್ಕರ್ ಸಮಿತಿಯ ವರದಿಯಲ್ಲಿ ಅಗ್ನಿಶಾಮಕ ಹಾಗೂ ಕಾರಾಗೃಹ ಇಲಾಖೆಗೆ ಈ ಸೌಲಭ್ಯವನ್ನು ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ಚೆರ್ಚೆ ನಡೆಸಲಾಗಿದೆ. ಈ ಎರಡೂ ಇಲಾಖೆಗಳನ್ನು ಸೇರಿಸಿ ವೇತನ ಪರಿಷ್ಕರಿಸುವ ಬಗ್ಗೆ ಮುಂದಿನ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹೆಸರನ್ನು ‘ಕಲ್ಯಾಣ ಕರ್ನಾಟಕ’ ಪ್ರದೇಶಾಭಿವೃದ್ದಿ ಮಂಡಳಿ ಎಂದು ಹೆಸರು ಬದಲಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು. ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಡಳಿತದಲ್ಲಿದ್ದ ಪ್ರದೇಶಗಳನ್ನು ಸ್ವಾತಂತ್ರ್ಯೋತ್ತರದಲ್ಲೂ ಅದೇ ಹೆಸರಿನಿಂದ ಕರೆಯುತ್ತಿರುವುದು ದಾಸ್ಯದ ಸಂಕೇತ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಹೈದರಾಬಾದ್ ಅಭಿವೃದ್ದಿ ಮಂಡಳಿ ಹಾಗೂ ಈ ಪ್ರದೇಶಗಳನ್ನು ಕಲ್ಯಾಣ ಕರ್ನಾಕಟವೆಂದು ಮರುನಾಮಕರಣ ಮಾಡುವ ಮೂಲಕ ಬಸವಣ್ಣನ ಹೆಸರನ್ನು ಅಜರಾಮರಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ 36 ಸಾವಿರ ಕೆರೆಗಳಿದ್ದು ಆರ್ಥಿಕ ಶಕ್ತಿ ಸಿಕ್ಕರೆ ಎಲ್ಲಾ ಕೆರೆಗಳನ್ನು ಅಭಿವೃದ್ದಿಪಡಿಸಿ ನೀರು ತುಂಬಿಸಲು ಕ್ರಮವಹಿಸಲಾಗುವುದು. ಬ್ಯಾರೇಜ್, ಪಿಕಪ್ ಡ್ಯಾಂಗಳನ್ನು ನಿರ್ಮಿಸುವ ಉದ್ದೇಶವು ಸಹ ಸರ್ಕಾರದ ಮಟ್ಟದಲ್ಲಿದೆ. ಒಂದೊಂದು ಟಿಎಂಸಿ ನೀರನ್ನು ಮಳೆಗಾಲದಲ್ಲಿ ಸಂಗ್ರಹಿಸಿ, ಕೆರೆಗಳಿಗೆ ತುಂಬಿಸಲು ಡಿಪಿಆರ್ ಸಿದ್ದಪಡಿಸಲಾಗುತ್ತಿದೆ. ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಚಿವ ಸಂಪುಟದ ಇತರೆ ಪ್ರಮುಖ ತೀರ್ಮಾನಗಳು:
- ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ಮಾನವಹಕ್ಕುಗಳ ಆಯೋಗದ ಓರ್ವ ಸದಸ್ಯರನ್ನು ಧಾರವಾಡಕ್ಕೆ ಸ್ಥಳಾಂತರಿಸುವ ಆದೇಶವನ್ನು ಸರ್ಕಾರ ಹಿಂಪಡೆಯಲು ತೀರ್ಮಾನ
- ಕೃಷಿ ಹಾಗೂ ತೋಟಗಾರಿಕಾ ಬೆಂಬಲ ಬೆಲೆ ಸಚಿವ ಸಂಪುಟ ಉಪಸಮಿತಿ ರಚನೆಗೆ ಮುಖ್ಯಮಂತ್ರಿಗೆ ಅಧಿಕಾರ ನೀಡಲು ಸಂಪುಟ ಒಪ್ಪಿಗೆನೂತನ ಸೌರ ನೀತಿಗೆ ತಿದ್ದುಪಡಿ ತರಲು, ಈ ಹಿಂದಿನ ಸೋಲಾರ್ ಪಾರ್ಕ್ ನಿರ್ಮಿಸಲು ಬೇಕಾಗಿದ್ದ 100 ಮೆಗಾವ್ಯಾಟ್ ಮಿತಿಯನ್ನು 25 ಮೆಗಾವ್ಯಾಟ್ ಗೆ ಇಳಿಸಲು, ಸರ್ಕಾರ ಹಾಗೂ ಖಾಸಗಿಯವರಿಗೂ ವಿದ್ಯುತ್ ಮಾರಾಟ ಮಾಡಲು ಅನುಮತಿಲೋಕಾಯುಕ್ತ ಅಭಿಯೋಜಕರಾಗಿ ಎಂ.ಎಚ್.ಇಟಗಿ ನೇಮಕಕ್ಕೆ ಸಂಪುಟ ಒಪ್ಪಿಗೆಲೋಕೋಪಯೋಗಿ ಇಲಾಖೆಯಿಂದ ಬೆಂಗಳೂರಿನ ಮಹಾನಗರದ ಸಿವಿಲ್ ಕೋರ್ಟ್ ಮೂಲಸೌಕರ್ಯ ಅಭಿವೃದ್ಧಿಗಾಗಿ 35 ಕೋಟಿ ರೂಗೆ ಅನುಮೋದನೆಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಕರಡು ನೀತಿ ರಚನೆಗೆ ಸಚಿವ ಸಂಪುಟ ಅನುಮೋದನೆ, ಬೆಂಗಳೂರು ಹೊರತು ಪಡಿಸಿ ಇತರೆ ನಗರ ಪಾಲಿಕೆ, ಪಟ್ಟಣ ಪಂಚಾಯತ್, ಹಾಗೂ ಪುರಸಭೆಗಳಿಗೆ ಈ ನಿಯಮಾವಳಿ ಅನ್ವಯವಾಗಲಿದೆ.ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಸಮಿತಿ ಹಾಗೂ ಅಧ್ಯಕ್ಷರ ನೇಮಕ ಮಾಡಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲು ತೀರ್ಮಾನ.
- ಕೊಪ್ಪಳ-ಗಿಣೀಗೇರಾ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಕೊಪ್ಪಳ ನಿಲ್ದಾಣಕ್ಕೆ-13.13 ಕೋಟಿ ರೂ,ಗಿಣಿಗೇರಾ ರೈಲು ನಿಲ್ದಾಣಕ್ಕೆ 29.40 ಕೋಟಿ ರೂ ಅನುದಾನ ಭರಿಸಲು ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ರೈಲ್ವೆ ಇಲಾಖೆಯ 50:50 ವೆಚ್ಚ ಭರಿಸುವ ಲೆಕ್ಕದಲ್ಲಿ ಈ ಅನುದಾನ ಭರಿಸಲು ಸಂಪುಟ ಒಪ್ಪಿಗೆದಾವಣಗೆರೆಯ ಜಗಳೂರಿನ 53 ಕೆರೆಗಳಿಗೆ ನೀರು ತುಂಬಿಸಲು 660 ಕೋಟಿ ರೂ.ಗೆ ಡಿಪಿಆರ್ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ.ಚಿತ್ರದುರ್ಗದ ಭರಮಸಾಗರದ 38 ಕೆರೆ ಹಾಗೂ ದಾವಣಗೆರೆಯ ಒಂದು ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ 528.11ಕೋಟಿ ರೂ ಗೆ ಡಿಪಿಆರ್ ಸಿದ್ಧಪಡಿಸಲು ಆಡಳಿತಾತ್ಮಕ ಅನುಮೋದನೆ.
- ಶಿಕಾರಿಪುರ ತಾಲೂಕಿನ ಉಡುಗಣಿ, ತಡಗಣಿ ಕರೆ ನೀರು ತುಂಬಿಸುವ 850ಕೋಟಿ ರೂ ಯೋಜನೆ ಒಪ್ಪಿಗೆಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ ಹಣ ಸಂಗ್ರಹಕ್ಕೆ ಹಾಗೂ ವಿಶ್ವೇಶ್ವರ ಜಲ ನಿಗಮಕ್ಕೆ 730 ಕೋಟಿ ರೂ ಅವಧಿ ಸಾಲ ಪಡೆಯಲು ಒಪ್ಪಿಗೆ
- ಕೆಪಿಎಸ್ ಸಿ ಸೇವಾ ಷರತ್ತು ನಿಯಮಕ್ಕೆ ತಿದ್ದುಪಡಿ. ಆರನೇ ವೇತನ ಅಯೋಗದಂತೆ ಕೆಪಿಎಸ್ ಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ವೇತನ ಪರಿಷ್ಕರಣೆಗೆ ಸಂಪುಟ ಸಮ್ಮತಿ
- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಸಿಕಾಂತ್ ಸೇಂಥಿಲ್ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ.ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಲಿದ್ದಾರೆ.ರಾಜ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸದಸ್ಯರ ನಿಯೋಗದಿಂದ ಭೇಟಿ ಮಾಡಿ ರಾಜ್ಯಕ್ಕೆ ನೆರೆ ಪರಿಹಾರಕ್ಕಾಗಿ ತುರ್ತು ಪರಿಹಾರ ಘೋಷಿಸಬೇಕು ಹಾಗೂ ಆದಷ್ಟು ಶೀಘ್ರದಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಲಿದ್ದೇವೆ.ಅಂದಾಜು 30 ಸಾವಿರ ಕೋಟಿ ರೂ ಹೆಚ್ಚು ಪರಿಹಾರ ನೀಡುವ ನಿರೀಕ್ಷೆ ಇದೆ .