ಬೈಂದೂರು: ಸಾವನ್ನು ಗೆದ್ದು ಮರು ಜನ್ಮ ಪಡೆದ ರೋಹಿತ್
ಬೈಂದೂರು: ತಾಲೂಕಿನ ಮರವಂತೆಯಲ್ಲಿ ಬೆಳಗ್ಗೆ 8.45ರ ವೇಳೆಗೆ ಬೋರ್‌ವೆಲ್ ಪಕ್ಕದ ಮಣ್ಣು ಕುಸಿದ ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ರೋಹಿತ್ 15 ಅಡಿ ಆಳಕ್ಕೆ ಜಾರಿ ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದ ಕಾರ್ಮಿಕರು ರಕ್ಷಣೆ ಮಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ನಂತರ ಅಗ್ನಿಶಾಮಕ ದಳ, ಬೈಂದೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಮೂಲಕ 15 ಅಡಿ ಆಳಕ್ಕೆ ಇಳಿದು ರೋಹಿತ್‌ನನ್ನು ಸಂಪರ್ಕಿಸಿದ್ದರು.
ಆಗ ಕುತ್ತಿಗೆ ತನಕ ಮಣ್ಣಿನ ಒಳಗೆ ರೋಹಿತ್ ಮುಳುಗಿಯಾಗಿತ್ತು. ತಕ್ಷಣವೇ ಆರೋಗ್ಯ ಇಲಾಖೆಯ ಮೂಲಕ ಹೊಂಡಕ್ಕೆ ಆಮ್ಲಜನಕದ ವ್ಯವಸ್ಥೆಯನ್ನು ಮಾಡಲಾಯಿತು. 11.15 ಗಂಟೆ ಸುಮಾರಿಗೆ ಅಗ್ನಿಶಾಮಕ ದಳದ ಅಧಿಕಾರಿಗಳು ರೋಹಿತ್‌ನನ್ನು ಮೇಲಕ್ಕೆತ್ತಲು ಆರಂಭಿಸಿದರು. ಮಣ್ಣು ತಲೆಯ ಮೇಲೆ ಕುಸಿಯದಂತೆ ದೊಡ್ಡದಾದ ಡ್ರಮ್ ಒಂದನ್ನು ಆತನ ಸುತ್ತಲೂ ಅಳವಡಿಸಿದರು. ರೋಹಿತ್ ಭೂಮಿಯೊಳಗೆ ಹುದುಗಿ ಹೋಗಿದ್ದರಿಂದ ಆಲ್ಲೇ ಪಕ್ಕದಲ್ಲಿ ಜೆಸಿಬಿ ಮೂಲಕ ಮತ್ತೊಂದು ಹೊಂಡವನ್ನು ಮಾಡಲಾಯಿತು.
ಸುಮಾರು 5.45 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ರೋಹಿತ್‌ನನ್ನು ಮೇಲಕ್ಕೆತ್ತಿದರು. ಘಟನೆ ಮಾಧ್ಯಮಗಳ ಮೂಲಕ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದರು. ರೋಹಿತ್ ಜೀವಂತವಾಗಿ ಮೇಲಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಜನ ಹರ್ಷಾಚರಣೆ ಮಾಡಿದರು. ಹೊಂಡದಿಂದ ಮೇಲಕ್ಕೆತ್ತಿದ ಕೂಡಲೇ ರೋಹಿತ್‌ನನ್ನು ಪಕ್ಕದ ಆದರ್ಶ ಆಸ್ಪತ್ರೆಗೆ ರವಾನಿಸಲಾಯಿತು.
ಸುಮಾರು 5.45 ಗಂಟೆಗಳ ಕಾಲ ಭೂಮಿಯ ಒಳಗಿದ್ದ ರೋಹಿತ್ ಗೆ ಆರಂಭಿಕ ಅಗತ್ಯ ಚಿಕಿತ್ಸೆಗಳನ್ನು ನೀಡಲಾಯಿತು. ಸದ್ಯ ದೇಹದ ಸಂಪೂರ್ಣ ಪರೀಕ್ಷೆಯನ್ನು ಮಾಡಿದ ವೈದ್ಯರು ಗ್ಲುಕೊಸ್ ನೀಡಿದ್ದಾರೆ. ರೋಹಿತ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೆಲ ಚಿಕಿತ್ಸೆ ನೀಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಸಾವು ಬೆನ್ನತ್ತಿ ಬಂದಿದ್ದರೂ ರೋಹಿತ್ ಆಯಸ್ಸು ಗಟ್ಟಿಯಿತ್ತು. 5.45 ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿದ ರೋಹಿತ್ ಸಾವು ಗೆದ್ದ ವೀರನಾಗಿ ಹೊರಬಂದಿದ್ದಾಗಿ ಸ್ಥಳೀಯವಾಗಿ ಮಾತನಾಡುತ್ತಿದ್ದಾರೆ.