ಸಂಕಷ್ಟದಲ್ಲಿ ಬಸ್ ನೌಕರರ ಬದುಕು,ಸಿಎಂ ಜೊತೆ ಚರ್ಚೆ: ಕೋಟಾ ಶ್ರೀನಿವಾಸ್

ಕುಂದಾಪುರ: ಕಳೆದ ಒಂದೆರಡು ತಿಂಗಳುಗಳಿಂದ ಕೊರೋನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆದ ಕಾರಣಕ್ಕೆ ಇಡೀ ದೇಶವೇ ಸಂಕಷ್ಟಕ್ಕೆ ಸಿಲಿಕಿದ್ದು, ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದವರು ತಮ್ಮ ದೈನಂದಿನ ಬದುಕು ನಡೆಸುವುದೇ ಕಷ್ಟವಾಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡ ಜನರ ಕಷ್ಟ ನೀಗಿಸಲು ಹಲವಾರು ರಿಯಾಯಿತಿ ಮತ್ತು ಯೋಜನೆಗಳನ್ನು ನೀಡಿದರು ಕೂಡ ಕರಾವಳಿ ಜಿಲ್ಲೆಗಳ ಹಾಗೂ ರಾಜ್ಯದ ಇನ್ನಿತರ ಭಾಗದ ಬಸ್ ನೌಕರರಿಗೆ ಅತ್ತ ಸಂಬಳವು ಇಲ್ಲದಾಗಿ ಇತ್ತ ಸರ್ಕಾರದ ಪರಿಹಾರವೂ ಇಲ್ಲದಾಗಿ ಕೊನೆಗೆ ಆಹಾರ ಕಿಟ್ ಕೂಡ ಇಲ್ಲದಾಗಿ ಅವರ ಸಂಕಷ್ಟ ಕೇಳುವವರು ಯಾರು ಕೂಡ ಇಲ್ಲದಂತಾಗಿದೆ. ಮೊನ್ನೆಯಷ್ಟೇ ಲಾಕ್ ಡೌನ್ ಸಡಲಿಕೆಯಾಗಿ ಬಸ್ ಸಂಚಾರಕ್ಕೆ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದರು ಕೂಡ ಅದು ಇಂದಿಗೂ ಗೊಂದಲದ ಗೂಡಾಗಿಯೇ ಉಳಿದು ಬಸ್ ನೌಕರರಿಗೆ ಕೆಲಸವಿಲ್ಲದಂತಾಗಿ ಎಂದಿಗೆ ಸಾಮಾನ್ಯ ಜೀವನ ಎನ್ನುವ ಹತಾಶೆ ಕಾಡಿದೆ.

ಇಂದು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಸರ್ಕಾರದ ಮೂಲಕ ಕೋಟ್ಯಾಂತರ ರೂಗಳ ಯೋಜನೆಯನ್ನು ಹಲವು ವರ್ಗದ ಶ್ರಮಿಕರಿಗೆ ಪರಿಹಾರ ಧನವಾಗಿ ನೀಡಲು ಅಧಿಸೂಚನೆ ಹೊರಡಿಸಿದರು ಕೂಡ ಅಲ್ಲಿಯೂ ಬಸ್ ನೌಕರರ ಕೂಗು ಕಾಣದಂತಾಗಿದೆ, ಕಡೆಗಣಿಸಲಾಗಿದೆ ಎಂದು ಕುಂದಾಪುರ, ಉಡುಪಿ ಮೂಲದ ಬಸ್ ನೌಕರರು ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷರು ಹಾಗೂ ಕುಂದಾಪುರ ಬಸ್ ಏಜೆಂಟ್ ಮುಖಂಡರಾದ ಶಂಕರ ಅಂಕದಕಟ್ಟೆ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ  ಸ್ಪಂದಿಸಿದ ಅವರು ಕೂಡಲೇ ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿಯವರೊಂದಿಗೆ ಬಸ್ ನೌಕರರ ಸಂಕಷ್ಟದ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದ್ದು. ಶಾಸಕರು ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಮಾತನಾಡಿ ಬಸ್ ನೌಕರರಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗೆ ಸಚಿವರು ಕೂಡ ಸಂಬಂಧ ಪಟ್ಟವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ.

ಒಟ್ಟಾರೆಯಾಗಿ ನಮ್ಮ ಶಾಸಕರು ಮತ್ತು ಸಚಿವರು ಬಸ್ ನೌಕರರ ಸಂಕಷ್ಟದ ಕುರಿತು ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿ ಸರ್ಕಾರದ ವತಿಯಿಂದ ಪರಿಹಾರ ಒದಗಿಸಿಕೊಟ್ಟು ಇಂತ ತುರ್ತು ಸಂಧರ್ಭದಲ್ಲಿ ಬಸ್ ನೌಕರರ ಬದುಕಿಗೆ ಆಸರೆಯಾಗಲಿ ಎನ್ನುವುದೇ ಬಸ್ ನೌಕರರ ಆಶಯ.

Leave a Reply

Your email address will not be published. Required fields are marked *

error: Content is protected !!