ಬಜೆಟ್‌‌ನಲ್ಲಿ ಮೀನುಗಾರಿಕೆ, ಪಶುಸಂಗೋಪನೆಗೆ ಬಂಪರ್ ಕೊಡುಗೆ

ಬೆಂಗಳೂರು: ಕರಾವಳಿ ಜಲಕೃಷಿ ಎಂದೇ ಕರೆಯಲ್ಪಡುವ ಹಿನ್ನೀರು ಜಲಕೃಷಿಯು ದೇಶದ ಮತ್ತು ರಾಜ್ಯದ ಒಟ್ಟಾರೆ ಮೀನುಗಾರಿಕೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಹಿನ್ನೀರು ಮೀನುಗಾರಿಕೆಯನ್ನು ಸದೃಢಗೊಳಿಸಲು ಮುಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರವನ್ನು ಮುಲ್ಕಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.

ಮಂಗಳೂರು ತಾಲೂಕು ಕುಳಾಯಿಯಲ್ಲಿ ಹೊಸ ಮೀನುಗಾರಿಕೆ ಬಂದರು ನಿರ್ಮಿಸಲಾಗುತ್ತಿದೆ. ಈ ಪ್ರದೇಶದ ರಫ್ತು ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರವನ್ನು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ₹12.50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದಿದ್ದಾರೆ.

ಮೀನುಗಾರಿಕೆ ಬಂದರು ಮತ್ತು ಮೀನುಗಾರಿಕೆ ಇಳಿದಾಣಗಳು, ಸಶಕ್ತ ಮೀನುಗಾರಿಕೆ ಪೂರಕ ಸೌಕರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ₹181 ಕೋಟಿ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಮೀನುಹಗಾರಿಕೆ ಬಂದರು ನಿರ್ಮಿಸುವುದಾಗಿ ಬಜೆಟ್‌‌ನಲ್ಲಿ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರನ್ನು ₹130 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ₹4 ಕೋಟಿ ಒದಿಗಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ತೆಂಗನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ (100 ಮೀಟರ್ ) ₹5 ಕೋಟಿ ಒದಗಿಸಲು ಕ್ರಮಕೈಗೊಳ್ಳಲಾಗುವುದು. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ನಿರ್ಮಿಸುತ್ತಿರುವ ಹೊರ ಬಂದರಿನ 2ನೇ ಹಂತದ ಕಾಮಗಾರಿಗಳನ್ನು ₹85 ಕೋಟಿ ವೆಚ್ಚದಲ್ಲಿ ಕೈಗೊಂಡು ಮೀನುಗಾರರ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಉಡುಪಿ ಜಿಲ್ಲೆಯ ಕೊಡೇರಿ ಮೀನುಗಾರಿಕೆ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ₹2 ಕೋಟಿಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ .

ಪಶುಸಂಗೋಪನಾ ಇಲಾಖೆಯ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ ಸಮಗ್ರ ನೀತಿ ರಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ತಿಳಿಸಿದ್ದಾರೆ.

ಇದಲ್ಲದೆ, ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ ಸಮಗ್ರ ವರಾಹ ಅಭಿವೃದ್ಧಿ ಯೋಜನೆಗೆ ₹5 ಕೋಟಿ ಅನುದಾನ ನೀಡಲು ಬಜೆಟ್ ನಲ್ಲಿ ಮೀಸಲಿಡಲಾಗಿದೆ. ಇದಲ್ಲದೆ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನ ಕೇಂದ್ರ ಸ್ಥಾಪನೆ. ಲಿಂಗ ನಿರ್ಧಾರಿತ ವಿರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಕರುಗಳ ಜನನ ಹೆಚ್ಚಿಸಲು ₹2 ಕೋಟಿ ಅನುದಾನ. ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ ₹1.5 ಕೋಟಿ ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ. “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ಅನುದಾನ ನೀಡಲು ಬಜೆಟ್ ತೀರ್ಮಾನಿಸಲಾಗಿದೆ.


Leave a Reply

Your email address will not be published. Required fields are marked *

error: Content is protected !!