‘ನಾಳೆಯೇ ರಾಜೀನಾಮೆ ಕೊಟ್ಟು ಹೋಗಲು ಸಿದ್ಧ’ ಎಂದು ಗುಡುಗಿದ ಬಿ.ಎಸ್.ವೈ
ದಾವಣಗೆರೆ : ತಮ್ಮ ಸಮುದಾಯದ ಮೂವರು ಶಾಸಕರಿಗೆ ಮಂತ್ರಿಗಿರಿ ನೀಡಲೇಬೇಕು ಎಂದು ಒತ್ತಡ ಹಾಕಿದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ನಡೆಯಿಂದ ಸಿಡಿಮಿಡಿಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‘ನಾಳೆಯೇ ರಾಜೀನಾಮೆ ಕೊಟ್ಟು ಹೋಗಲು ಸಿದ್ಧ’ ಎಂದು ಗುಡುಗಿದರು. ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ‘ಪಂಚಮಸಾಲಿ’ ಸಮಾಜದ ಶಕ್ತಿ ಪ್ರದರ್ಶಿಸಲು ಮಂಗಳವಾರ ಹಮ್ಮಿಕೊಂಡಿದ್ದ ‘ಹರ ಜಾತ್ರೆ’ ಹಾಗೂ ‘ಬೆಳ್ಳಿ ಬೆಡಗು’ ಸಮಾರಂಭದ ವೇದಿಕೆ ರಾಜಕೀಯ ವೇದಿಕೆಯಾಯಿತು. ಕಾರ್ಯಕ್ರಮದ ರೂವಾರಿ ವಚನಾನಂದ ಸ್ವಾಮೀಜಿ, ‘ಲಿಂಗಾಯತ ಪಂಚಮಸಾಲಿ ಸಮಾಜದ 13 ಶಾಸಕರಿದ್ದಾರೆ. ಮೂವರಿಗಾದರೂ ಸಚಿವ ಸ್ಥಾನ ನೀಡಬೇಕು. ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು’ ಎನ್ನುತ್ತಾ ಸಭಿಕರಿಂದ ಕೈ ಎತ್ತಿಸಿದರು. ‘ಅವರನ್ನು ಕೈಬಿಟ್ಟರೆ ಇಡೀ ಸಮಾಜ ನಿಮ್ಮ ಕೈಬಿಡುತ್ತದೆ’ ಎಂದೂ ಎಚ್ಚರಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ, ‘ಬುದ್ಧಿ… ನಿಮ್ಮ ಬಾಯಲ್ಲಿ ಇಂಥ ಮಾತು ಬರಬಾರದು. ನೀವು ಸಲಹೆ ಕೊಡಬೇಕು, ಅದನ್ನು ಬಿಟ್ಟು ಬೆದರಿಕೆ ಹಾಕಬಾರದು. ಈ ರೀತಿ ಮಾತನಾಡುವುದಾದರೆ ನಾನು ಹೊರಡುತ್ತೇನೆ’ ಎಂದು ಎದ್ದುನಿಂತರು. ಈ ರೀತಿ ಮಾತನಾಡದಂತೆ ಸ್ವಾಮೀಜಿಗೆ ಸೂಚಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಅವರಿಗೆ ತಾಕೀತು ಮಾಡಿದರು. ಆಗ ಮುಖ್ಯಮಂತ್ರಿ ಅವರನ್ನು ಸಮಾಧಾನಪಡಿಸಿ ಕೂರಿಸಿದ ಸ್ವಾಮೀಜಿ, ‘ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ನಿಮ್ಮ ಪರಿಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೂ ಗೊತ್ತಾಗಲಿ ಎಂದೇ ಹೀಗೆ ಹೇಳುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು. ಬಳಿಕ ಭಾವುಕರಾಗಿ ಮಾತನಾಡಿದ ಯಡಿಯೂರಪ್ಪ, ‘ಸ್ವಾಮೀಜಿ ಏನು ಬೇಕಾದರೂ ಸಲಹೆ ನೀಡಲಿ. ವೈಯಕ್ತಿಕವಾಗಿ ಕುಳಿತು ಚರ್ಚಿಸುತ್ತೇನೆ. ಬೇಡ ಅಂದರೆ ನಾಳೆಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಸಿದ್ಧನಿದ್ದೇನೆ’ ಎಂದು ಗುಡುಗಿದರು. |