ಎಚ್ ಡಿ ಕೆ ಬ್ರದರ್ಸ್ ಆಟಕ್ಕೆ ಬ್ರೇಕ್ ಹಾಕಿದ ಬಿ ಎಸ್ ವೈ
ಬೆಂಗಳೂರು: ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲು ಅನುಮತಿ ಕೋರಿ ಮನವಿ ಸಲ್ಲಿಸಿದ ಬೆನ್ನಲ್ಲೇ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿರುವ ನಿಯೋಜಿತ ಸಿಎಂ ಬಿಎಸ್ ಯಡಿಯೂರಪ್ಪ ಅವರು, ತಮ್ಮ ಆಟವನ್ನು ಆರಂಭಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಿಎಸ್ ಯಡಿಯೂರಪ್ಪನವರು ಜುಲೈ ತಿಂಗಳಲ್ಲಿ ಅನುಮೋದನೆಗೊಂಡ ಎಲ್ಲಾ ಕಾಮಗಾರಿ, ವರ್ಗಾವಣೆಯನ್ನು ತಡೆ ನೀಡುವಂತೆ ಸೂಚನೆ ನೀಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯ ಕಾರ್ಯದರ್ಶಿಗಳು ನಿಯೋಜಿತ ಸಿಎಂ ಆಗಿರುವ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದರು. ಆ ಬಳಿಕ ಪತ್ರ ಬರೆದಿದ್ದಾರೆ. ಜುಲೈ ತಿಂಗಳಲ್ಲಿ ನಡೆಸಿರುವ ಹೊಸ ಯೋಜನೆಗಳು ಹಾಗೂ ವರ್ಗಾವಣೆ ಮಾಡುವ ಸಂಬಂಧಿಸಿದ ಪ್ರಸ್ತಾವಗಳ ಮೇಲೆ ಅನುಮೋದನೆಗೊಂಡಿರುವ, ಜಾರಿಯಾಗದೇ ಇರುವ ಆದೇಶಗಳನ್ನು ಮುಂದಿನ ಆದೇಶ ಬರುವವರೆಗೂ ಜಾರಿ ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಮೈತ್ರಿ ಸರ್ಕಾರದ ಸಂಖ್ಯಾಬಲ ಕಡಿಮೆ ಆಗುತ್ತಿದಂತೆ ದೋಸ್ತಿ ನಾಯಕರು ವರ್ಗಾವಣೆ ದಂಧೆ ನಡೆಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದರು. ಅಲ್ಲದೇ ಸರ್ಕಾರದ ಉರುಳುವ ಭಯದಿಂದಲೇ ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದರು. ಸದ್ಯ ಬಿಎಸ್‍ವೈ ಅವರ ನಡೆ ಜಿದ್ದಾ ಜಿದ್ದಿನ ರಾಜಕಾರಣಕ್ಕೆ ನಂದಿ ಹಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರ ಅಂತಿಮ ದಿನಗಳಲ್ಲಿ ಸಾಕಷ್ಟು ವರ್ಗಾವಣೆಗಳು ಜುಲೈ ತಿಂಗಳಿನಲ್ಲಿಯೇ ನಡೆದಿತ್ತು. ಅಲ್ಲದೇ ಇದೇ ಕ್ರಮದಲ್ಲಿ ದೋಸ್ತಿ ಸರ್ಕಾರ ದುಡ್ಡು ಮಾಡಲು ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಗಾವಣೆ ನಡೆದಿದೆ. ರೇವಣ್ಣ ಅವರ ಇಲಾಖೆಯಲ್ಲೇ ಅತಿ ಹೆಚ್ಚು ವರ್ಗಾವಣೆ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿ ನಾಯಕರ ಆರೋಪದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಪತ್ರ ಬರೆದು ಎಲ್ಲ ಆದೇಶಗಳಿಗೆ ತಡೆ ನೀಡುವಂತೆ ಸೂಚಿಸಿದ್ದಾರೆ.