ಸಹೋದರ ರಮೇಶ ಅನರ್ಹತೆ; ಸ್ವಾಗತಿಸಿದ ಸತೀಶ ಜಾರಕಿಹೊಳಿ

ಬೆಳಗಾವಿ: ‘ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಸಹೋದರ ರಮೇಶ ಜಾರಕಿಹೊಳಿ ಸೇರಿದಂತೆ ಮೂವರು ಶಾಸಕರನ್ನು ವಿಧಾನಸಭಾಧ್ಯಕ್ಷ ರಮೇಶಕುಮಾರ್‌ ಅನರ್ಹ ಮಾಡಿದ್ದು ಸರಿಯಾಗಿಯೇ ಇದೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರ ಉರುಳಲು ಜಾರಕಿಹೊಳಿ ಕುಟುಂಬ ಕಾರಣವಲ್ಲ. ಈ ಶಾಸಕರನ್ನು ಮೊದಲೇ ಅನರ್ಹ ಮಾಡಿದ್ದರೆ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನು ಅನರ್ಹ ಮಾಡುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಇವರೆಲ್ಲ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಅದಕ್ಕಾಗಿ ಇವರ ವಿರುದ್ಧ ಸ್ಪೀಕರ್‌ ಅವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ನುಡಿದರು.

ಯಾವ ಆಧಾರ:

‘ಸರ್ಕಾರ ರಚನೆಗೆ 112 ಶಾಸಕರ ಬಲದ ಅವಶ್ಯಕತೆ ಇದೆ. ಬಿಜೆಪಿಯವರಿಗೆ ತಾಂತ್ರಿಕವಾಗಿ ಇಷ್ಟೊಂದು ಬಲ ಇಲ್ಲ. ಯಾವ ಆಧಾರದ ಮೇಲೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!