ಅನಂತ ಹೆಗಡೆಗೆ ಹುಚ್ಚು ಹಿಡಿದಿದ್ದರೆ ಚಿಕಿತ್ಸೆ ಕೊಡಿಸಬೇಕು: ಬ್ರಿಜೇಶ್ ಕಾಳಪ್ಪ
ಬೆಂಗಳೂರು: ಸಂಸದ ಅನಂತಕುಮಾರ ಹೆಗಡೆ ಅವರಿಗೆ ಹುಚ್ಚು ಹಿಡಿದಿದ್ದರೆ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ. ಲೋಕಸಭಾಧ್ಯಕ್ಷರಿಗೆ ಈ ಸಂಬಂಧ ಪತ್ರ ಬರೆದಿದ್ದು, ಹೆಗಡೆ ಅವರು ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ, ಹೆಗಡೆ ಅವರ ಮಾತುಗಳನ್ನು ಗಮನಿಸಿದರೆ ಮಾನಸಿಕ ಆರೋಗ್ಯ ಸಮಸ್ಯೆ ಇದ್ದಂತೆ ಕಾಣುತ್ತಿದೆ. ಅದು ನಿಜವಾಗಿದ್ದರೆ ಸಂವಿಧಾನದ ನಿಯಮಾನುಸಾರ ಅವರು ಸಂಸತ್ ಸದಸ್ಯರಾಗಿ ಮುಂದುವರಿಯುವಂತಿಲ್ಲ ಎಂದಿದ್ದಾರೆ.
ಸಭಾಧ್ಯಕ್ಷರು ಮುತುವರ್ಜಿವಹಿಸಿ ಹೆಗಡೆ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಅವರ ಮಾನಸಿಕ ಆರೋಗ್ಯ ಸ್ಥಿಮಿತವಾಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಹುಚ್ಚು ಹಿಡಿದಿರುವುದು ಕಂಡುಬಂದರೆ ತಜ್ಞ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕು. ನಂತರ ಕಾರವಾರ ಸಂಸತ್ ಸದಸ್ಯ ಸ್ಥಾನ ಖಾಲಿಯಾಗಿದೆ ಎಂದು ಘೋಷಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಸ್ವಾತಂತ್ರ್ಯ ಹೋರಾಟ ಒಂದು ರೀತಿಯಲ್ಲಿ ದೊಡ್ಡ ನಾಟಕದಂತೆ ಕಂಡುಬರುತ್ತದೆ. ಬ್ರಿಟಿಷರನ್ನು ಬೆಂಬಲಿಸಿದಂತೆ ಹೋರಾಟ ನಡೆದಿತ್ತು. ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟ, ಉಪವಾಸ ಸತ್ಯಾಗ್ರಹ ಸಹ ಒಂದು ನಾಟಕ’ ಎಂದು ಹೆಗಡೆ ಇತ್ತೀಚೆಗೆ ಹೇಳಿದ್ದರು.
ವಿವಿಧ ಸಂದರ್ಭಗಳಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಗಳು, ಟ್ವೀಟ್ ಮಾಡಿದ್ದ ವಿವರಗಳನ್ನು ಪತ್ರದಲ್ಲಿ ನಮೂದಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.