ಬ್ರಹ್ಮಾವರ: ಪಿಪಿಸಿ ಕಾಲೇಜ್‌ನ ವಿದ್ಯಾರ್ಥಿಯ ಸಂಶಯಾಶ್ಪದ ಸಾವು
ಬ್ರಹ್ಮಾವರ: ಉಡುಪಿ ಪಿಪಿಸಿ ಕಾಲೇಜಿನ ವಿದ್ಯಾರ್ಥಿಯೊರ್ವ ಸಂಶಯಾಶ್ಪದ ರೀತಿಯಲ್ಲಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದು, ತನ್ನ ಮಗನ ಸಾವಿನಲ್ಲಿ ಸಂಶಯವಿದೆಂದು ವಿದ್ಯಾರ್ಥಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಕಮ್ಮರಡಿಯ ಈಶ್ವರ ಆರ್.ಎಮ್ ಅವರ ಮಗ ಅವಿನಾಶ್ (20) ದ್ವೀತಿಯ ವರ್ಷದ ಬಿ.ಕಾಂ ಪದವಿ ಓದುತ್ತಿದ್ದು, ಮಣಿಪಾಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ, ಬಿಡುವಿನ ವೇಳೆಯಲ್ಲಿ ಝೊಮೋಟೊದಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿರುದ್ದ ಅವಿನಾಶ್ ಕೋಳಿ ಫಾರಂ ಮಾಡುವ ಉದ್ದೇಶದಿಂದ ಸ್ನೇಹಿತೆಯ ಮನೆಯಲ್ಲಿ ಕಳೆದ 20 ದಿನಗಳಿಂದ ಉಳಿದುಕೊಂಡಿದ್ದ.
ಆತ ಕೋಳಿ ಫಾರಂ ಮಾಡಲು ಕೊಕ್ಕರ್ಣೆ ಪೆಜಮಂಗೂರು ಬಳಿಯ ಗುಂಡಾಲು ಅಣೆಕಟ್ಟು ಬಳಿ ಬಿದಿರನ್ನು ಕಡಿದು ಸಂಗ್ರಹಿಸಲು ರವಿವಾರ ಸ್ನೇಹಿತೆಯ ಸಹೋದರ ಶ್ರೀಕಾಂತ್ ಜೊತೆ ಬೆಳಿಗ್ಗೆ 9 ಗಂಟೆಗೆ ತೆರಳಿದ್ದ.
ಮಧ್ಯಾಹ್ನ 1 ಗಂಟೆಗೆ ಅಯ್ಯಪ್ಪಸ್ವಾಮಿ ಶಿಬಿರದ ಪೂಜೆಗೆಂದು ಶ್ರೀಕಾಂತ್ ಹೋಗಿದ್ದನು. ಶ್ರೀಕಾಂತ ಅಲ್ಲಿನ ಪೂಜೆ ಮತ್ತು ಪ್ರಸಾದ ಸ್ವೀಕರಿಸಿ ಹಿಂದಿರುಗಿ ಬಂದಾಗ ಅವಿನಾಶ್ ಕಾಣಿಸದೆ ಇದ್ದಾಗ ನೇರೆ ಹೊರೆಯವರಿಗೆ ಮಾಹಿತಿ ನೀಡಿ ಹುಡುಕಿದಾಗ ಗುಂಡಾಲು ಹೊಳೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ತಕ್ಷಣ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ, ಕೊಕ್ಕರ್ಣೆಯ ಕ್ಲಿನಿಕ್‌ನಲ್ಲಿ ತೋರಿಸಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈಧ್ಯಾಧಿಕಾರಿಗಳು ಅವಿನಾಶ್‌ನನ್ನು ಪರೀಕ್ಷಿಸಿ ಅದಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅವಿನಾಶನು ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ಮೃತಪಟ್ಟ ಬಗ್ಗೆ ತಿಳಿಸಿದ ಶ್ರೀಕಾಂತನ ಹೇಳಿಕೆ ವಿಚಾರ ಸಂಶಯವಿದ್ದು, ಆತನ ಜೊತೆಗೆ ಯಾರಾದರೂ ಸೇರಿ ಅವಿನಾಶನನ್ನು ಹೊಳೆಗೆ ದೂಡಿರಬಹುದು ಎಂಬ ಸಂಶಯವಿರುವುದಾಗಿ ಅವಿನಾಶ್ ತಂದೆ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವಿನಾಶ್ ಬಂಡೆಯ ಬಳಿ ಕುಳಿತಿದ್ದ ಸ್ಥಳದಲ್ಲಿ ಆತನ ಶೂ, ಮತ್ತು ಬಟ್ಟೆ ಇದ್ದಿದ್ದು, ಕೆಲಸ ಮಾಡಿ ಸ್ನಾನ ಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತ ಪಟ್ಟಿರ ಬಹುದೆಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಮೃತ ದೇಹವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯರ ವರದಿಗಾಗಿ ಕಾಯುತ್ತಿರುವುದಾಗಿ ಬ್ರಹ್ಮಾವರ ಪೊಲೀಸರು ತಿಳಿಸಿದ್ದಾರೆ.