ನನ್ನ ಸೋಲಿಗೆ ಬಿಜೆಪಿ ಸಂಸದ ಬಚ್ಚೇಗೌಡರೇ ನೇರ ಕಾರಣ: ಎಂಟಿಬಿ
ಬೆಂಗಳೂರು: ಹೊಸಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಅನರ್ಹ ಶಾಸಕ ಹಾಗೂ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ಎಂ.ಟಿ.ಬಿ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಆದರೆ ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೇಟ್ ನೀಡಿಲ್ಲವೆಂಬ ಕಾರಣಕ್ಕೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನನ್ನ ಮೇಲೆ ನಂಬಿಕೆಯಿಟ್ಟು ಸುಮಾರು 71 ಸಾವಿರ ಮತದಾರರು ತಮಗೆ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ನಾನು ಉಪಚುನಾವಣೆಯಲ್ಲಿ ಸೋಲಲು ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡರೇ ನೇರ ಕಾರಣ. ಬಚ್ಚೇಗೌಡರು ಶಾಸಕರಾಗಿ, ಸಚಿವರಾಗಿ, ಈಗ ಸಂಸದರಾಗಿ ಬಿಜೆಪಿ ಪಕ್ಷದಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿ ಪಕ್ಷಕ್ಕೆ ಬದ್ಧರಾಗಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನನ್ನ ಪರವಾಗಿ ಕೆಲಸ ಮಾಡದೆ ಮಗನನ್ನ ಬೆಂಬಲಿಸಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.