ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮಿಲನ ಮೂಲಕ ಹಿಂದೂ ಧರ್ಮದ ಒಡಕಿಗೆ ಹುನ್ನಾರ: ಯಶ್‌ಪಾಲ್
ಉಡುಪಿ: ಹಿಂದೂ ಧರ್ಮದಲ್ಲಿ ಜಾತಿಯಾಧಾರಿತ ಒಡಕು ಸೃಷ್ಟಿಸುವ ಹುನ್ನಾರದೊಂದಿಗೆ ರಾಜಕೀಯ ಉದ್ದೇಶದಿಂದ ಆಯೋಜಿಸಿರುವ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮಿಲನ ಕಾರ್ಯಕ್ರಮ ರಾಷ್ಟ್ರ ಭಕ್ತ ಬಿಲ್ಲವ ಸಮಾಜಕ್ಕೆ ಮಾಡಿದ ಅವಮಾನ ಎಂದು ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಚಿಂತನೆಗಳೊಂದಿಗೆ ಸನಾತನ ಹಿಂದೂ ಧರ್ಮದ ಕಟ್ಟಾಳುಗಳಾಗಿ ಕೋಟಿ ಚೆನ್ನಯ್ಯ ಮತ್ತು ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿರುವ ಬಿಲ್ಲವ ಸಮಾಜವನ್ನು ಪ್ರತ್ಯೇಕಿಸಿ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರವನ್ನು ಈಗಾಗಲೇ ಸ್ವಾಭಿಮಾನಿ ಬಿಲ್ಲವ ಸಮಾಜ ಮುಖಂಡರು ವಿರೋಧಿಸುತ್ತಿದ್ದಾರೆ. ಇವರ ಧ್ವನಿಯಾಗಿ ಸಮಸ್ತ ಹಿಂದೂ ಸಮಾಜ ಈ ಕಾರ್ಯಕ್ರಮವನ್ನು ವಿರೋಧಿಸಿ ಸ್ವಾಭಿಮಾನಿ ಬಿಲ್ಲವ ಸಮಾಜಕ್ಕೆ ನೈತಿಕ ಬೆಂಬಲ ನೀಡಬೇಕಾಗಿದೆ.
ಹಿಂದೂ ಧರ್ಮದ ರಕ್ಷಣೆಗಾಗಿ ತ್ಯಾಗವನ್ನು ಮಾಡಿ, ಎಲ್ಲರೊಂದಿಗೂ ಸೌಹಾರ್ದಯುತವಾಗಿ ಜೀವನ ನಡೆಸುತ್ತಾ ಸಮಾಜದ ಇತರ ಜಾತಿಗಳಿಗೆ ಮಾದರಿಯಾಗಿರುವ ಬಿಲ್ಲವ ಸಮಾಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಲು ಸಮಾಜದ ಮುಖಂಡರೇ ದಾರಿತಪ್ಪಿಸಲು ಮುಂದಾಗಿರುವುದು ದುರದೃಷ್ಟಕರ.
ಇದೇ ರೀತಿ ಮುಂಬರುವ ದಿನಗಳಲ್ಲಿ ಮೊಗವೀರ, ಬಂಟ ಮೊದಲಾದ ಜಾತಿಗಳೊಂದಿಗೆ ಮುಸ್ಲಿಂ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿರುವ ಬಗ್ಗೆಯೂ ಮಾಹಿತಿ ಇದ್ದು, ಈ ಸ್ನೇಹ ಸಮ್ಮಿಲನದ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಈ ನಿರ್ಧಾರವನ್ನು ಕೂಡಲೇ ಕೈ ಬಿಟ್ಟು, ಸಮಸ್ತ ಹಿಂದೂ ಸಮಾಜ ಬಿಲ್ಲವ ಸಮಾಜದ ಜೊತೆ ನಿಂತು ಈ ಧರ್ಮ ವಿರೋಧಿಗಳ ಮುಖವಾಡವನ್ನು ಬಯಲಿಗೆಳೆಯುವಲ್ಲಿ ಕೈ ಜೋಡಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.