ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶ ಮುಂದೂಡಿಕೆ: ಸೊರಕೆ
ಉಡುಪಿ: ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶ ಮೂಡಿಸಿರುವ ಗೊಂದಲದ ಪರಿಸ್ಥಿತಿಯನ್ನ ಮನಗಂಡು ಈ ಸಮಾವೇಶ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ ಸಚಿವರು ಹಾಗು ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕೆಗೊಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೊರಕೆ ಸಮಾಜದಲ್ಲಿ ಶಾಂತಿ-ಸೌಹಾರ್ದ ಸ್ಥಾಪಿಸುವ ಮೂಲಕ ಸರ್ವರ ಪ್ರಗತಿಯನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು ಆದರೆ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳುಮಟ್ಟದ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಿಸಿ ಶುದ್ಧ ಸುಳ್ಳುಗಳನ್ನು ಪಸರಿಸುತ್ತಿದ್ದಾರೆ. ನಮ್ಮ ಸ್ವಾಗತ ಸಮಿತಿಯ ಸದಸ್ಯರು ಮತ್ತು ಅತಿಥಿಗಳ ಮೇಲೆ ಕೀಳುಮಟ್ಟದ ಅಸಹನೀಯ ಭಾಷೆಯನ್ನು ಬಳಸಿ ಅಪಪ್ರಚಾರ ಮಾಡುತ್ತಿರುವುದಲ್ಲದೇ ಈ ಸಮಾವೇಶದಿಂದ ಹಿಂದೆ ಸರಿಯುವಂತೆ ಮಾನಸಿಕ ಒತ್ತಡ ಮತ್ತು ದೈಹಿಕ ಹಲ್ಲೆ ನಡೆಸುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಈ ಕಾರಣಗಳಿಂದ ಸ್ವಾಗತ ಸಮಿತಿಯ ಒಂದಿಬ್ಬರು ಹಿಂದೆ ಸರಿದ್ದಿದ್ದಾರೆ ಹಾಗೂ ಉದ್ಘಾಟಕರಾಗಿ ಬರಬೇಕಾಗಿದ್ದ ಸಚಿವ ಶ್ರೀನಿವಾಸ ಪೂಜಾರಿಯವರು ತಮಗೆ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗುದಿಲ್ಲ ಎಂದು ಹೇಳಿರುತ್ತಾರೆ ಹಾಗು ಉಡುಪಿಯಲ್ಲಿ ನಡೆಯುತ್ತಿರುವ ಪರ್ಯಾಯದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಆಗಬಾರದೆಂಬ ಸ ದೂ ದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು
ಮಾಹಿತಿ ನೀಡಿಯೇ ಆಮಂತ್ರಣ ಪತ್ರಿಕೆಯಲ್ಲಿ ಸಚಿವರ ಹೆಸರು
ಈ ಸಮಾವೇಶವನ್ನು ಉದ್ಘಾಟಿಸಲಿದ್ದ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿದ ಆಮಂತ್ರಣದ ಅಸಮರ್ಪಕತೆಯ ಬಗ್ಗೆ ವದಂತಿಗಳನ್ನು ಹರಡಲಾಗಿದೆ. ಇದು ಶುದ್ಧ ಸುಳ್ಳು. ಅವರನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸಿ, ಒಪ್ಪಿಗೆ ಪಡೆದು, ಅನಂತರ ಕೆಲವೇ ಕೆಲವು ಆಮಂತ್ರಣ ಪತ್ರಿಕೆಯ ಪ್ರತಿಗಳನ್ನು ಮುದ್ರಿಸಿ ನಿಯೋಗವೊಂದರ ಮೂಲಕ ಅವರನ್ನು ಭೇಟಿ ಮಾಡಿ ವಿದ್ಯುಕ್ತವಾಗಿ ಆಮಂತಿಸಲಾಗಿತ್ತು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡ ಬಳಿಕ ಮರುದಿನ ಜನರನ್ನು ಆಮಂತ್ರಿಸಲಿಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರತಿನಿಧಿಗಳ ಮೂಲಕ ವಿತರಿಸಲಾಯಿತು. ಅವರಿಗೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ದಾಖಲಿಸಲಾಗಿದೆ ಎಂದು ಹೇಳಿರುವುದು ಸತ್ಯವಲ್ಲ ಎಂದು ಅವರು ಹೇಳಿದರು .
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಂಘಟನೆ ಮುಖಂಡ ಯಾಸೀನ್ ಮಲ್ಪೆ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ್ ತೋನ್ಸೆ, ನವೀನ ಚಂದ್ರ ಸುವರ್ಣ , ವೈ ಸುಕುಮಾರ್ , ರಾಜಾರಾಮ್ , ಮತ್ತಿತರರು ಉಪಸ್ಥಿತರಿದ್ದರು