ಕೇಂದ್ರದಿಂದ ಬಿಗ್ ಶಾಕ್! ಬೈಕಿನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶ

ನವದೆಹಲಿ: ಲಾಕ್ ಡೌನ್ 2.0ಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಖಾಸಗಿ ವಾಹನ ಮಾಲೀಕರಿಗೆ ಶಾಕ್ ನೀಡಿದ್ದು, ಲಾಕ್ ಡೌನ್ ಅವಧಿಯಲ್ಲಿ ತುರ್ತು ಸಂದರ್ಭ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಬೈಕಿನಲ್ಲಿ ಒಬ್ಬರು ಮತ್ತು ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಲು ಅನುಮತಿ ನೀಡಿದೆ.

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಭಾರದ ಕಾರಣ ಇಂದಿನಿಂದ 19 ದಿನಗಳ ಕಾಲ ಅಂದರೆ ಮೇ 3ರವರೆಗೆ ಮತ್ತೊಂದು ಅವಧಿಯ ಲಾಕ್‌ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಹೇಗೆ ನಡೆದುಕೊಳ್ಳಬೇಕು? ಅವರಿಗೆ ಏನೆಲ್ಲ ಲಭ್ಯ? ಏನೆಲ್ಲಾ ನಿಷೇಧ ಎಂಬ ಕುರಿತ ಸಂಪೂರ್ಣ ವಿವರವನ್ನು ಈ ಮಾರ್ಗಸೂಚಿ ಹೊಂದಿದೆ. ಈ ಮಾರ್ಗಸೂಚಿಯಲ್ಲಿ ಸರ್ಕಾರೇತರ ಅಂದರೆ ಖಾಸಗಿ ವಾಹನಗಳ ಕುರಿತೂ ಒಂದಷ್ಟು ನಿರ್ದೇಶನ ನೀಡಲಾಗಿದ್ದು, ಇಂದಿನಿಂದ ಆರಂಭಗೊಂಡಿರುವ ಲಾಕ್‍ಡೌನ್2 ಅವಧಿಯಲ್ಲಿ ಬೈಕ್/ಸ್ಕೂಟರ್ ನಲ್ಲಿ ಇಬ್ಬರು, ಕಾರಿನಲ್ಲಿ ನಾಲ್ಕು ಮಂದಿ ತೆರಳುವಂತಿಲ್ಲ ಎಂದು ಹೇಳಿದೆ.

ಲಾಕ್‍ಡೌನ್ ವಿಧಿಸಿದ್ದರೂ ಸಾರ್ವಜನಿಕರು ವಾಹನಗಳನ್ನು ರಸ್ತೆಗೆ ಇಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ನಿಯಮದ ಪ್ರಕಾರ ಬೈಕಿನಲ್ಲಿ ಒಬ್ಬರೇ ತೆರಳಬೇಕು. ಕಾರಿನಲ್ಲಿ ಇಬ್ಬರಿಗೆ ಮಾತ್ರ ಹೋಗಲು ಅನುಮತಿ ನೀಡಲಾಗಿದೆ. ಕಾರಿನಲ್ಲಿ ತೆರಳುವವರು ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಹಿಂಬದಿಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.

ಹಾಟ್ ಸ್ಪಾಟ್‍ಗಳಲ್ಲಿ ಕಠಿಣ ನಿಯಮ
ಇನ್ನು ಕೊರೋನಾ ವೈರಸ್ ಹಾಟ್ ಸ್ಪಾಟ್‍ಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ. ಕೆಲಸದ ಸ್ಥಳದಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ವಿಧಿಸಲಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಸಾರ್ವಜನಿಕ ಸ್ಥಳ, ಉದ್ಯೋಗ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮದ್ಯ, ಗುಟ್ಕಾ, ತಂಬಾಕು ಮಾರಾಟಕ್ಕೆ ನಿಷೇಧ. ಮೊದಲ ಬಾರಿಗೆ ಲಾಕ್‍ಡೌನ್ ಘೋಷಣೆಯಾದ ಬಳಿಕ ಯಾವುಕ್ಕೆ ವಿನಾಯಿತಿಗಳನ್ನು ನೀಡಲಾಗಿತ್ತೋ ಅವುಗಳಿಗೆ ವಿನಾಯಿತಿ ಮುಂದುವರಿಸಲಾಗಿದೆ.

ಈ ಮಾರ್ಗಸೂಚಿಯಲ್ಲಿ ವಿನಾಯಿತಿ ಪಡೆದ ಕ್ಷೇತ್ರಗಳಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಿದರೆ ಏ.20ರ ನಂತರ ಕೆಲ ಕ್ಷೇತ್ರಗಳು ತೆರೆಯಲಿದೆ. ರಸ್ತೆ ಬದಿಯ ಡಾಬಾ ಮತ್ತು ಟ್ರಕ್ ರಿಪೇರಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

1 thought on “ಕೇಂದ್ರದಿಂದ ಬಿಗ್ ಶಾಕ್! ಬೈಕಿನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶ

Leave a Reply

Your email address will not be published. Required fields are marked *

error: Content is protected !!