ವಾಹನ ಸವಾರರಿಗೆ, ಮದ್ಯ ಪ್ರಿಯರಿಗೆ ಬಿಗ್ ಶಾಕ್!
ಬೆಂಗಳೂರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅನೇಕ ವಸ್ತುಗಳ, ಸೇವೆಗಳ ಬೆಲೆ ಏರಿಕೆ ಯಾಗಲಿದೆ. .ಅಧಿಕ ಸಂಪನ್ಮೂಲ ಕ್ರೂಡೀಕರಣದ ನೆಪವೊಡ್ಡಿ ತೆರಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಬೆಲೆ ಇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಸಕ್ತಿ ತೋರಿಲ್ಲ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ: ಪೆಟ್ರೋಲ್, ಡೀಸೆಲ್ ಮೆಲಿನ ತೆರಿಗೆ ಪ್ರಮಾಣವನ್ನು ಕ್ರಮವಾಗಿ ಶೇ 32ರಿಂದ 35 ಮತ್ತು ಶೇ 21ರಿಂದ 24ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹1.60 ಮತ್ತು ಪ್ರತಿ ಲೀಟರ್ ಡಿಸೇಲ್ ದರ ₹1.59 ಏರಿಕೆಯಾಗಲಿದೆ.
ಮದ್ಯವೂ ದುಬಾರಿ: ಮದ್ಯದ ಎಲ್ಲ 18 ಘೋಷಿತ ಬೆಲೆ ಸ್ಲ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 6ರಷ್ಟು ಹೆಚ್ಚಿಸಲಾಗಿದೆ. ಅಬಕಾರಿ ಇಲಾಖೆಯಿಂದ ಪ್ರಸಕ್ತ ವರ್ಷ 22 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಸಾರಿಗೆ ಇಲಾಖೆಯಿಂದ 7 ಸಾವಿರ ಕೋಟಿ ರೂ.ಆದಾಯ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದು ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ಸಾರ್ವಜನಿಕ ಮತ್ತು ಖಾಸಗೀ ಸಹಭಾಗಿತ್ವದಲ್ಲಿ ಬೆಳಗಾವಿ, ಹುಬ್ಬಳ್ಳಿ ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟದ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.
ಮುದ್ರಾಂಕ ಶುಲ್ಕ ಇಳಿಕೆ : ₹20 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಅಪಾರ್ಟ್‍ಮೆಂಟ್‍ಗಳ ಮೊದಲನೇ ನೋಂದಣಿ ಮುದ್ರಾಂಕ ಶುಲ್ಕ ಶೇ 5ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಆದರೆ, ₹20 ಲಕ್ಷಕ್ಕಿಂತ ಕಡಿಮೆ ಮೌಲ್ಯ ಎಂದು ಉಲ್ಲೇಖಿಸಿರುವುದರಿಂದ ಈ ಶುಲ್ಕ ಕಡಿತದಿಂದ ರಿಯಲ್ ಎಸ್ಟೇಟ್ ವಲಯಕ್ಕೆ ಹೆಚ್ಚಿನ ಪ್ರಯೋಜನ ದೊರೆಯದು ಎನ್ನಲಾಗುತ್ತಿದೆ.