ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಧರ್ಮಗುರು ಆತ್ಮಹತ್ಯೆ: ಸಿಸಿಟಿವಿಯಲ್ಲಿ ದಾಖಲು

ಶಿರ್ವ: ಮೂಡುಬೆಳ್ಳೆಯಲ್ಲಿ ಹುಟ್ಟಿ ಬೆಳೆದು ದೇವರ ಸೇವೆಗೆ ತನ್ನನ್ನೇ ಮೀಸಲಾಗಿಟ್ಟಿದ್ದ ಯುವ ಧರ್ಮಗುರು ಫಾ.ಮಹೇಶ್ ಡಿಸೋಜ (36)ಅವರ ಅಕಾಲಿಕ ನಿಧನ, ವಿದ್ಯಾರ್ಥಿ ವೃಂದ ಶಿಕ್ಷಕ, ಶಿಕ್ಷಕೇತರ ವೃಂದ ಮತ್ತು ಶಿರ್ವ ದೇವಾಲಯದ ವ್ಯಾಪ್ತಿಯ ಭಕ್ತರಿಗೆ ತೀವೃ ಅಘಾತವನ್ನುಂಟು ಮಾಡಿದೆ. ದೇವರ ಸೇವೆಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡು ಸಮಾಜದೊಂದಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದ ಅವರ ಅಗಲುವಿಕೆ ಶಿರ್ವ ಪರಿಸರ ಮಾತ್ರವಲ್ಲ ಇಡೀ ಉಡುಪಿ ಧರ್ಮ ಪ್ರಾಂತ್ಯದ ಭಕ್ತರಿಗೆ ನೋವುಂಟಾಗಿದೆ.

ನಿನ್ನೆ ಸಂಜೆ ಶಿರ್ವ ಚರ್ಚ್‌ನಲ್ಲಿ ಶುಕ್ರವಾರದ ವಿಶೇಷ ಆರಾಧನೆ ಮತ್ತು ಪೂಜಾ ವಿಧಿಗಳನ್ನು ಮಾಡಿದ , ಶಾಲಾ ಅಧ್ಯಾಪಕ ವೃಂದದವರಿಗೆ ಶಾಲೆಯು ಆಯೋಜಿಸಿದ ವಿಶೇಷ ತರಬೇತಿಯನ್ನು ಕೂಡ ನೀಡಿದ ಫಾ. ಮಹೇಶ್‌ರವರು ಎಂದಿನಂತೆ ಲವಲವಿಕೆಯಿಂದಲೇ ಇದ್ದರು. ರಾತ್ರಿ8.30 ಸುಮಾರಿಗೆ ಸಹಾಯಕ ಧರ್ಮಗುರು ಫಾ. ಅಶ್ವಿನ್, ಫಾ.ಮಹೇಶ್ ಅವರನ್ನು ಊಟಕ್ಕೆ ಕರೆದಾಗ, ಹತ್ತು ನಿಮಿಷ ಕೆಲಸವಿದೆ ಬಳಿಕ ಬರುತ್ತೇನೆ ಎಂದು ಶಾಲೆಯ ಪ್ರಿನ್ಸಿಪಾಲ್ ಕೊಠಡಿಗೆ ಹೋಗಿದ್ದರು.

ಈಗ ಬರುತೇನೆಂದು ಹೇಳಿದ ಫಾ.ಮಹೇಶ್ ಬರದೆ ಇದ್ದುದ್ದನ್ನು ಗಮನಿಸಿದ, ಫಾ. ಅಶ್ವಿನ್ ಪ್ರಿನ್ಸಿಪಾಲ್ ಇದ್ದ ಕೊಠಡಿ ಬಳಿ ಹೋಗಿ ನೋಡಿದಾಗ ಫಾ. ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ತಕ್ಷಣವೇ ಪಾಲನಾ ಮಂಡಳಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತಾದರೂ ಅವರನು ಬದುಕಿಸಲು ಸಾಧ್ಯವಾಗಲಿಲ್ಲ.

ಫಾ. ಮಹೇಶ್ ಪ್ರಿನ್ಸಿಪಾಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದನ್ನು ಶಿರ್ವ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

2012 ರಲ್ಲಿ ಗುರು ದೀಕ್ಷೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಿಂದ ಸ್ವೀಕರಿಸಿದ್ದ, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಪ್ರಾರಂಭವಾದ ಬಳಿಕ ಪ್ರಪ್ರಥಮ ಗುರು ದೀಕ್ಷೆಯನ್ನು ಪಡೆದ ಕೀರ್ತಿ ಫಾ. ಮಹೇಶ್ ಅವರದ್ದು.

ಗುರುದೀಕ್ಷೆ ಸ್ವೀಕರಿಸಿದ ಬಳಿಕ ಮೌಂಟ್ ರೋಸರಿ ಮತ್ತು ಮಿಲಾಗ್ರಿಸ್ ಕಲ್ಯಾಣಪುರ ದೇವಾಲಯಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು.

2016 ರಲ್ಲಿ ಶಿರ್ವ ಮತ್ತು ದೇವಾಲಯಕ್ಕೆ ವರ್ಗಾವಣೆಗೊಂಡ ಇವರು, ಇಲ್ಲಿಯೂ ಸಹಾಯಕ ಧರ್ಮಗುರುಗಳೊಂದಿಗೆ, ಡಾನ್ ಬಾಸ್ಕೋ ಶಾಲೆಯ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಫಾ. ಮಹೇಶ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಶಿರ್ವ ದೇವಾಲಯಕ್ಕೆ ಭೇಟಿ ನೀಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಪ್ರಮುಖರಾದ ಸುನೀಲ್ ಕಬ್ರಾಲ್ , ಮೆಲ್ವಿನ್ ಡಿಸೋಜ, ವಿಲ್ಸನ್ ರೋಡ್ರಿಗಸ್, ಮೈಕಲ್ ಡಿಸೋಜಾ, ಮೆಲ್ವಿನ್ ಅರಾನ್ನ ಮತ್ತಿತರರು ಉಪಸ್ಥಿತರಿದ್ದರು.

ಫಾ. ಮಹೇಶ್ ಅವರ ಅಂತಿಮ ಕ್ರಿಯೆ ಅಕ್ಟೋಬರ್ 15, ಮಂಗಳವಾರ ಮಧ್ಯಾಹ್ನ 3 ಗಂಟೆಗೆ  ಶಿರ್ವ ದೇವಾಲಯದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

3 thoughts on “ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಧರ್ಮಗುರು ಆತ್ಮಹತ್ಯೆ: ಸಿಸಿಟಿವಿಯಲ್ಲಿ ದಾಖಲು

Leave a Reply

Your email address will not be published. Required fields are marked *

error: Content is protected !!