ಬೆಂಗಳೂರು: ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ

ಬೆಂಗಳೂರು: ಇಡಿಯಿಂದ ಕಾಂಗ್ರೆಸ್ ಶಾಸಕ ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಕಾಂಗ್ರೆಸ್, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ.

ಪ್ರತಿಭಟನೆ ಒಕ್ಕಲಿಗ ಸಮುದಾಯದ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಕಾಂಗ್ರೆಸ್ ಸಚಿವ ಡಿಕೆ ಶಿವಕುಮಾರ್ ರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದ್ದು, ಕೇಂದ್ರದ ಮೋದಿ ಸರ್ಕಾರದ ಈ ಕ್ರಮವನ್ನು ರಾಜ್ಯದ ಜನರು ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗುಂಡೂರಾವ್ ಅವರು, ‘ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡಬಾರದು ಎಂಬ ಸಂದೇಶ ಬೃಹತ್ ಜನಸಮೂಹದ ಮೂಲಕ ವ್ಯಕ್ತವಾಗಿದೆ. ಇಲ್ಲಿ ಇಂದು 50 ಸಾವಿರದಷ್ಡು ಜನ ಸೇರಲಿದ್ದು, ಇದು ಕೇಂದ್ರಕ್ಕೆ ನೀಡುವ ಪ್ರತ್ಯುತ್ತರ ಎಂದರು. ಅಂತೆಯೇ ಕೇಂದ್ರ ಸರ್ಕಾರ ಐಟಿ. ಇಡಿ ಇಲಾಖೆ ಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಡಿಕೆಶಿ ಅವರು ತನಿಖೆಗೆ ಸಹಕಾರ ನೀಡಿದ ಮೇಲೂ ಅವರಿಗೆ ಕಿರುಕುಳ ನೀಡುವ ಸಲುವಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ವಿಜಯ್ ಮಲ್ಯ, ನೀರವ್ ಮೋದಿ ಪ್ರಕರಣವನ್ನು ಪ್ರಸ್ತಾಪಿಸಿದ ಗುಂಡೂರಾವ್ ಅವರು, ‘3 ತಿಂಗಳಲ್ಲಿ ಬ್ಯಾಂಕುಗಳಿಂದ 32 ಸಾವಿರ ಕೋಟಿ ಲೂಟಿಯಾಗಿದೆ. ಅದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಅವರು ಪ್ರಶ್ನಿಸಿದರು. ವಿರೋಧ ಪಕ್ಷದವರನ್ನು ಮುಗಿಸುವ ತಂತ್ರವನ್ನು ಸಹಿಸಲು ಸಾಧ್ಯವಿಲ್ಲ. ಜನ ಇದರ ವಿರುದ್ಧ ಎದ್ದು ನಿಂತಿದ್ದಾರೆ. ಇದನ್ನು ಕೇಂದ್ರಕ್ಕೆ ತಡೆಯಲು ಸಾಧ್ಯವಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!