ಬೇಳಂಜೆ ಕಿಂಡಿ ಅಣೆಕಟ್ಟು ಕಳಪೆ : ಗ್ರಾಮಸ್ಥರ ಆಕ್ರೋಶ
ಕಾರ್ಕಳ : ಹೆಬ್ರಿ ತಾಲೂಕಿನ ಬೇಳಂಜೆ ಕೆಳಬಾದ್ಲು ಎಂಬಲ್ಲಿ ಸೀತಾನದಿಗೆ ಹಾಕಲಾದ ಕಿಂಡಿ ಅಣೆಕಟ್ಟು ಕಳಪೆ ಕಾಮಗಾರಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಪೂರ್ಣಗೊಳ್ಳುವ ಮೊದಲೇ ಇದು ಕಳಪೆ ಎನ್ನುವುದು ಬೆಳಕಿಗೆ ಬಂದಿದೆ. ಅಣೆಕಟ್ಟಿನಲ್ಲಿ ನೀರು ಶೇಖರಣೆಗಾಗಿ ಹಲಗೆಗಳನ್ನು ಹಾಕುತ್ತಿದ್ದು ಹಲಗೆ ಹಾಕುವ ಕಾರ್ಯ ಪೂರ್ಣಗೊಳ್ಳುವ ಮೊದಲೇ ಹಾಕಿರುವ ಹಲಗೆಯ ಮಧ್ಯದಲ್ಲಿ ನೀರು ಹೊರಬರುತ್ತಿದೆ. ಅಲ್ಲದೆ ಅಣೆಕಟ್ಟಿಗೆ ಹಾಕಿರುವ ಕಾಂಕ್ರೀಟ್ ಈಗಾಗಲೇ ಎದ್ದು ಹೋಗಿದ್ದು ಕಬ್ಬಿಣ ಎದ್ದು ಕಾಣುತ್ತಿದೆ ಹಾಗೂ ಡ್ಯಾಂನ ಮೇಲ್ಗಡೆ ಅಳವಡಿಸಿದ ತಡೆಗಳು ಎದ್ದು ಹೋಗಿವೆ. ಈ ಬಗ್ಗೆ ಪರಿಶೀಲನೆಗೆ ಬಂದ ಅಧಿಕಾರಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಕಾಮಗಾರಿ ನಡೆಯುವಾಗ ಇಂಜಿನಿಯರ್ ಯಾಕೆ ಭೇಟಿ ನೀಡಲಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕಿತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುತ್ತಿರುವಾಗಲೇ ಈ ಕಳಪೆ ಕಾಮಗಾರಿ ಬೆಳಕಿಗೆ ಬಂದಿದ್ದು ಜನ ನಿರಾಶೆಗೊಂಡಿದ್ದಾರೆ. ಈ ಬಗ್ಗೆ ಗ್ರಾಮಸಭೆಯಲ್ಲೂ ಸಂಬಂಧಪಟ್ಟವರ ಗಮನಕ್ಕೆ ತಂದಿರುವ ಗ್ರಾಮಸ್ಥರು ಆದಷ್ಟು ಶೀಘ್ರ ಇದನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಕೂಡಲೇ ಸಂಬಂದಪಟ್ಟ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.