ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ- ಡಿಸಿ ಹೆಪ್ಸಿಬಾ
ಉಡುಪಿ, ಅಗಸ್ಟ್ 17 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮಳೆಗಾಲ ಈಗಾಗಲೇ ಭಾಗಶಃ
ಚುರುಕುಗೊಂಡಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ
ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ಮತ್ತು ಮೆದುಳು ಜ್ವರ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಜನರು ಜಾಗೃತರಾಗಿರುವಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಮಲೇರಿಯಾ ಪ್ರಕರಣಗಳಲ್ಲಿ ತೀವ್ರ ಇಳಿಕೆ ದಾಖಲಾಗಿದ್ದು, 2012 ರಲ್ಲಿ 2000 ಕ್ಕೂ ಮಿಕ್ಕಿ ಇದ್ದ ಮಲೇರಿಯಾ ಪ್ರಕರಣಗಳು 2018 ರ ಡಿಸೆಂಬರ್ ವೇಳೆಗೆ 221 ಪ್ರಕರಣಗಳೊಂದಿಗೆ 10 ಪಟ್ಟು ಇಳಿಕೆ ದಾಖಲಾಗಿರುತ್ತದೆ. 2018 ರ ಜುಲೈವರೆಗೆ 128 ಮಲೇರಿಯಾ ಪ್ರಕರಣಗಳಿದ್ದು, ಪ್ರಸಕ್ತ 2019 ರಲ್ಲಿ ಅದೇ ವೇಳೆಗೆ 53 ಪ್ರಕರಣಗಳು ದಾಖಲಾಗಿವೆ.
ಈ ಪೈಕಿ 2019 ನೇ ಜುಲೈ ತಿಂಗಳಲ್ಲಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ 1800 ಕ್ಕೂ ಹೆಚ್ಚು ಬೋಟ್‍ಗಳಲ್ಲಿ ಸಂಗ್ರಹಿತ ನೀರಿನಿಂದ ಹಾಗೂ ಒಣಮೀನು ತೊಟ್ಟಿಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ಉಲ್ಬಣವಾಗಿದ್ದರಿಂದ ಮತ್ತು ಕಾರ್ಮಿಕರು ಬಂದರಿನ ತೆರೆದ ಪ್ರದೇಶದಲ್ಲಿ ಮಲಗಿರುವುದರಿಂದ ಮಲ್ಪೆ ಬಂದರಲ್ಲೇ ಜುಲೈನಲ್ಲಿ 15 ಪ್ರಕರಣಗಳು ದಾಖಲಾಗಿರುವುದಾಗಿದೆ.
ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಮೀನುಗಾರಿಕಾ ಇಲಾಖೆಗಳ
ಸಮನ್ವಯದೊಂದಿಗೆ ಸೊಳ್ಳೆಗಳ ನಿಯಂತ್ರಣ, ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆ, ನಿಂತ ನೀರಿನ ಸೂಕ್ತ ವಿಲೇವಾರಿ ಇತ್ಯಾದಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮಲೇರಿಯಾ ಪ್ರಕರಣಗಳ ಮೇಲೆ ಹಿಡಿತ ಸಾದಿಸಲಾಗಿದೆ. ಬಂದರು ಪ್ರದೇಶ ಹಾಗೂ ಮಲ್ಪೆ ನಗರ ಪ್ರದೇಶಗಳ ಸುತ್ತಮುತ್ತ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ 2018 ರಲ್ಲಿ ಒಟ್ಟು 228 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಜುಲೈ 2018 ರ ವೇಳೆಗೆ 150 ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ 2019 ರ ಜುಲೈ ವರೆಗೆ 99 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದಾಗ್ಯೂ ಜಿಲ್ಲೆಯಿಂದ ಹೆಚ್ಚಿನ ಕೆಲಸಕ್ಕಾಗಿ ಬೆಂಗಳೂರು ಹಾಗೂ ಮಂಗಳೂರಿಗೆ ವಲಸೆ ಹೋಗಿ ಕೆಲಸ ಮಾಡುತ್ತಿರುವ ನಾಗರಿಕರು ಡೆಂಗ್ಯೂ ಹಾಗೂ ಇತರ ಜ್ವರಗಳೊಂದಿಗೆ ವಿಶ್ರಾಂತಿ ಹಾಗೂ ಚಿಕಿತ್ಸೆಗಾಗಿ ಊರಿಗೆ ಮರಳುವುದರಿಂದ ಅಂತಹ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ರೋಗ ಜಿಲ್ಲೆಯಲ್ಲಿ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸೊಳ್ಳೆಗಳ ಮೇಲೆ ನಿಯಂತ್ರಣ ಸಾಧಿಸುವಂತೆ ಆರೋಗ್ಯ ಇಲಾಖೆಯ ಎಲ್ಲಾ ಅಧೀನ ಸಂಸ್ಥೆಗಳಿಗೆ ಕಟ್ಟೆಚ್ಚರ ನೀಡಲಾಗಿದೆ.
ಈಗಾಗಲೇ ಆರೋಗ್ಯ ಇಲಾಖೆಯಿಂದ ಸೊಳ್ಳೆ ಜನಿತ ಪ್ರದೇಶಗಳ ಪತ್ತೆ ಹಾಗೂ ಲಾರ್ವಾಗಳ ನಾಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಚಟುವಟಿಕೆ ಜಾರಿಯಲ್ಲಿದೆ. ಅಲ್ಲದೇ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಕಾಳಜಿಯಿಂದ ಈ ಕಾರ್ಯಕ್ರಮವನ್ನು ನಡೆಸಲು ಸೂಚಿಸಲಾಗಿದೆ. ಪ್ರತಿ 15 ದಿನಕೊಮ್ಮೆ ನಗರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಸೊಳ್ಳೆ ಉತ್ಪತ್ತಿ ತಾಣಗಳ ಶೋಧ ಕಾರ್ಯ ನಡೆಯುತ್ತಲಿದೆ.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೊಳ್ಳೆ ಜನಿತ ಪ್ರದೇಶಗಳ ಶೀಘ್ರಪತ್ತೆಗೆ ಅನುಕೂಲವಾಗಲು ಉಡುಪಿ ಹೆಲ್ಪ್ ಆಪ್ ನಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಸೊಳ್ಳೆ ಜನಿತ ಸಾಂಕ್ರಾಮಿಕ ರೋಗಗಳು ಹತೋಟಿಯಲ್ಲಿದ್ದು, ಜನರು ಆತಂಕ ಪಡುವ ಕಾರಣವಿಲ್ಲ. ಆದಾಗ್ಯೂ ಯಾವುದೇ ರೀತಿಯಲ್ಲಿ ಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.
ಮಳೆಗಾಲದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಹಾಗೂ
ಸಂಪೂರ್ಣ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಲ್ಲಿ ಟೆಸ್ಟ್ ಕಿಟ್ ಗಳು ಹಾಗೂ ಔಷಧಿ/ ಉಪಕರಣಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.