ಬಂಟ್ವಾಳ: ಸಿಬಿಐ ಎಂದು ಬ್ಯಾಂಕ್ ಉದ್ಯೋಗಿಯ ದೋಚಿದರು
ಬಂಟ್ವಾಳ: ಕ್ರೈಂಬ್ರಾಂಚ್ ಪೊಲೀಸ್ ಎಂದು ಯಾಮಾರಿಸಿ ನಿವೃತ್ತ ಬ್ಯಾಂಕ್ ಉದ್ಯೋಗಿಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿ ಪರಾರಿಯಾದ ಘಟನೆ ಶನಿವಾರ ಹಾಡುಹಗಲೇ ಬಿ.ಸಿ.ರೋಡಿಗೆ ಸಮೀಪದ ಕೈಕಂಬದಲ್ಲಿ ನಡೆದಿದೆ. ಕೈಕಂಬ ಸಮೀಪದ ಮಿತ್ತಬೈಲು ಕೊಡಂಗೆ ನಿವಾಸಿ ಶಿವರಾಮ್ ಪ್ರಸಾದ್ ಶರ್ಮ ನಕಲಿ ಪೊಲೀಸಪ್ಪನ ಬಣ್ಣದ ಮಾತಿಗೆ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳಕೊಂಡವರಾಗಿದ್ದಾರೆ. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವ ಶಿವರಾಮ್ ಪ್ರಸಾದ್ ಶರ್ಮ ಅವರು ಮಧ್ತಾಹ್ನ 12 ಗಂಟೆ ಹೊತ್ತಿಗೆ ಮನೆಯಿಂದ ಕೈಕಂಬದ ಸೆಲೂನ್ ಗೆಂದು ಏಕಾಂಗಿಯಾಗಿ ನಡೆದುಕೊಂಡು ಬರುತ್ತಿದ್ದಾಗ ಬೈಕಿನಲ್ಲಿ ಬಂದ ಸವಾರನೊಬ್ಬ ದಿಢೀರ್ ಬೈಕ್ ನಿಲ್ಲಿಸಿ ತಾನು ಆಶೋಕ್ ಕ್ರೈ ಬ್ರಾಂಚ್ ಪೊಲೀಸ್ ಎಂದು ಪರಿಚಯಿಸಿಕೊಂಡು, ನೀವು ಮೈಯಲ್ಲಿ ಈ ರೀತಿಯಾಗಿ ಬಂಗಾರ ಹಾಕಿಕೊಂಡು ತಿರುಗಬಾರದು,ಕಳ್ಳರಿದ್ದಾರೆ ಎಂದು ಎಚ್ಚರಿಸಿದ್ದಾನೆ. ಅದೇ ಹೊತ್ತಿಗೆ ಅಲ್ಲಿಗೆ ಇನ್ನೋರ್ವ ವ್ಯಕ್ತಿ ಅಗಮಿಸಿದ್ದು, ಅ ವ್ಯಕ್ತಿಯಲ್ಲಿಯೂ ಆಶೋಕ್ ನಾನು ಕ್ರೈ ಬ್ರಾಂಚ್ ಪೊಲೀಸ್ ಎಂದು ಪರಿಚಯಿಸಿಕೊಂಡು ಅವರಲ್ಲು ಹೀಗೆ ಪುನರುಚ್ಚರಿಸಿದ್ದಾನೆ. ಆಗ ಈ ವ್ಯಕ್ತಿ ಯಾವುದೇ ಅನುಮಾನಬಾರದಂತೆ ಆಶೋಕನ ಗುರುತಿನ ಚೀಟಿ ವಿಚಾರಿಸಿದ್ದಾನೆ.ತಕ್ಷಣ ಆತ ಪೊಲೀಸ್ ಗುರುತಿನ ಚೀಟಿ ತೋರಿಸಿದಂತೆ ಅತನ ಕೈಯಲ್ಲಿದ್ದ ಅಭರಣವನ್ನು ಕಳಚಿ ಕೊಟ್ಟಿದ್ದು,ಅದನ್ನು ಕರ್ಚೀಪ್ ನಲ್ಲಿ ಕಟ್ಟಿ ವಾಪಸ್ ಕೊಟ್ಟಿದ್ದಾನೆ. ಶಿವರಾಮ್ ಪ್ರಸಾದ್ ಶರ್ಮ ಅವರ ಕೈಯಲ್ಲಿದ್ದ ಉಂಗುರ ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕರ್ಚಿಫ್ ನಲ್ಲಿ ಕಟ್ಟಿಕೊಡುತ್ತೇನೆ ಎಂದು ತೆಗೆದುಕೊಂಡಿದ್ದಾನೆ , ಇವನ ಸೋಗಿನ ಮಾತಿಗೆ ಯಾಮಾರಿದ ಇವರು ತನ್ನಲ್ಲಿದ್ದ 2 ತಲಾ ಚಿನ್ನದ ಸರ, ಉಂಗುರವನ್ನು ಅಶೋಕ್ ಎಂಬ ವ್ಯಕ್ತಿಯ ಕೈಗೆ ನೀಡಿದ್ದಾರೆ. ಬಳಿಕ ಅಶೋಕ್ ಬಂಗಾರ ಹಾಗೂ ಮೊಬೈಲ್ ನ್ನು ಕರ್ಚೀಪ್ ನಲ್ಲಿ ಕಟ್ಟಿ ಶಿವರಾಮ್ ಪ್ರಸಾದ್ ಅವರ ಕೈಗಿತ್ತು ಬೈಕಿನಲ್ಲಿ ಇನ್ನೊರ್ವನನ್ನು ಅಶೋಕ್ ಕೂರಿಸಿ ತೆರಳಿದ್ದಾರೆ. ಬಳಿಕ ಇವರು ಆಭರಣ, ಮೊಬೈಲ್ ಫೋನ್ ನ್ನು ಕಟ್ಟಿದ ಲಕೋಟೆಯನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್ ಮಾತ್ರ ಉಳಿದ್ದಿತ್ತು.ಅಭರಣವನ್ನು ಲಪಟಾಯಿಸಲಾಗಿತ್ತು. ಆಗಲೇ ಇವರಿಗೆ ನಕಲಿಪೊಲೀಸರಿಂದ ಮೋಸಹೋಗಿರುವುದು ಅರಿವಿಗೆ ಬಂತು. ಗಲಿಬಿಲಿಗೊಂಡ ತಕ್ಷಣ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಅವರು ಮಾಹಿತಿ ನೀಡಿದ್ದಾರೆ, ಶಿವರಾಮ್ ಪ್ರಸಾದ್ ಶರ್ಮ ಅವರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಕಲಿ ಪೊಲೀಸರಿಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.ಶಿವರಾಮ್ ಪ್ರಸಾದ್ ಕಳೆದುಕೊಂಡಿರುವ ಚಿನ್ನಾಭರಣದ ಮೌಲ್ಯ 1.04 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಎಸ್.ಐ.ಅವಿನಾಶ್ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. |