ಬಂಟ್ವಾಳ: ಗೂಡ್ಸ್ ಟೆಂಪೋವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ
ಬಂಟ್ವಾಳ: ಗೂಡ್ಸ್ ಟೆಂಪೋವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವುದನ್ನು ವಿಟ್ಲ ಪೊಲೀಸರು ಕೊಳ್ನಾಡುಗ್ರಾಮದ ಕಟ್ಟತ್ತಿಲ ಎಂಬಲ್ಲಿ ಬುಧವಾರ ಮುಂಜಾನೆ ಪತ್ತೆಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಟೆಂಪೋ ಚಾಲಕ ಸಹಿತ ಇಬ್ಬರು ಪರಾರಿಯಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ
ಪಿಎಸ್ ಐ ಯಲ್ಲಪ್ಪ ಎಸ್ ಮತ್ತು ಸಿಬ್ಬಂದಿಗಳು ರಾತ್ರಿಗಸ್ತಿನಲ್ಲಿದ್ದಾಗ ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ಮುಂಜಾನೆಯ ವೇಳೆ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬರುತ್ತಿದ್ದ ಅಮೂಲ್ ಐಸ್ ಕ್ರೀಂ ಎಂದು ಬರೆದಿರುವ ಮಿನಿ ಗೂಡ್ಸ್ ಟೆಂಪೋವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ಪೊಲೀಸರ ಸೂಚನೆಯನ್ನು ದಿಕ್ಕರಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿ ಕಟ್ಟತ್ತಿಲ ಗೋಪಾಲಕೃಷ್ಣ ಮಠ ಎಂಬಲ್ಲಿ ನಿಲ್ಲಿಸಿ ಚಾಲಕ ಸಹಿತ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.ವಾಹನ ಬೆನ್ನಟಿಕೊಂಡು ಬಂದ ಪೊಲೀಸರು ಸ್ಥಳಕ್ಕಾಗಮಿಸಿ ವಾಹನವನ್ನು ಪರಿಶೀಲಿಸಿದಾಗ 2 ಹಸು ಮತ್ತು 1 ಗಂಡು ಕರುವನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ.ತಕ್ಷಣ ಪೊಲೀಸರು ವಾಹನ ಹಾಗೂ ಜಾನುವಾರನ್ನು ವಶಪಡಿಸಿದರು. ಆರೋಪಿಗಳು ಈ ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಹಿಂಸಾತ್ಮಕ ರೀತಿಯಲ್ಲಿ ಕೇರಳ ಕಡೆಗೆ ಅಕ್ರಮವಾಗಿ ಸಾಗಟ ಮಾಡಲಾಗುತ್ತಿದೆ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ನಡೆಯುತ್ತಿದೆ.