ಬೆಂಗಳೂರು: ನೂಕುನುಗ್ಗಲು ಇಂದಿರಾ ಕ್ಯಾಂಟೀನ್ ಬಂದ್
ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡಬಗ್ಗರಿಗೆ ಉಚಿತವಾಗಿ ಆಹಾರ ವಿತರಿಸುವುದನ್ನು ಬಿಬಿಎಂಪಿ ಒಂದೇ ದಿನದಲ್ಲಿ ಸ್ಥಗಿತಗೊಳಿಸಿದೆ. ಉಪಾಹಾರ ಸ್ವೀಕರಿಸಲು ನೂಕುನುಗ್ಗಲು ಉಂಟಾಗಿ, ಅದು ಸೋಂಕು ಹರಡಲು ಕಾರಣವಾಗುತ್ತದೆ ಎಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಯಾಂಟೀನ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದರು.
ಲಾಕ್‌ಡೌನ್ ವೇಳೆ ಆಹಾರ ಸಿಗದವರಿಗೆ ನೆರವಾಗುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರ ಪೂರೈಸಲು ಬಿಬಿಎಂಪಿ ನಿರ್ಧರಿಸಿತ್ತು. ಮಂಗಳವಾರ ಬೆಳಿಗ್ಗೆ ನಗರದ ಬಹುತೇಕ ಇಂದಿರಾ ಕ್ಯಾಂಟೀನ್‌ಗಳ ಬಳಿ ಜನ ಸಾಲುಗಟ್ಟಿ ನಿಂತಿದ್ದರು. ಪರಸ್ಪರ 1 ಮೀ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ಜನ ಕಡೆಗಣಿಸಿದ್ದರು. ಕೆಲವೆಡೆ ಆಹಾರ ಪಡೆಯಲು ನೂಕುನುಗ್ಗಲು ಕೂಡಾ ಉಂಟಾಗಿತ್ತು.
‘ಜನರು ನಮ್ಮ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕ್ಯಾಂಟೀನ್‌ಗಳ ಬಳಿ ಜನಸಂದಣಿ ಸೇರಲು ಮತ್ತೆ ಅವಕಾಶ ಕಲ್ಪಿಸಿದರೆ ಕೊರೊನಾ ಸೋಂಕು ಹಬ್ಬದಂತೆ ತಡೆಯುವ ನಮ್ಮ ಪ್ರಯತ್ನಗಳು ಸಂಪೂರ್ಣ ವಿಫಲವಾಗುತ್ತವೆ. ಹಾಗಾಗಿ ಬುಧವಾರದಿಂದ ಇಂದಿರಾ ಕ್ಯಾಂಟೀನ್‌ಗಳನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಆದೇಶ ಮಾಡಿದ್ದೇನೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.