ಉಡುಪಿ ಜಿಲ್ಲೆಯಾದ್ಯಂತ ಈದುಲ್ ಅಝಾ (ಬಕ್ರೀದ್) ಹಬ್ಬ ಆಚರಣೆ
ಉಡುಪಿ : ಜಿಲ್ಲೆಯಾದ್ಯಂತ ಸೋಮವಾರ ಮುಸ್ಲಿಂ ಬಾಂಧವರು ಈದುಲ್ ಅಝಾ (ಬಕ್ರೀದ್) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಉಡುಪಿ ಜಾಮೀಯ ಮಸೀದಿಯ ಮೌಲಾನ ಅಬ್ದುಲ್ ರಶೀದ್ ನದ್ವಿ ಮತ್ತು ಉಡುಪಿ ಅಂಜುಮಾನ್ ಮಸೀದಿಯ ಮೌಲಾನ ಇನಾಯತುಲ್ಲಾ ರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಈದ್ ನಮಾಝ್ ನಡೆಯಿತು. ಈ
ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿ ಮೂಳೂರು ಜುಮಾ ಮಸೀದಿಯ ಖತೀಬ್ ಅಲ್ಲಾಜ್ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಸಾ ಪಾರಾಯಣ
ನಡೆಯಿತು. ಕುಂದಾಪುರ ಜುಮಾ ಮಸೀದಿ ಧರ್ಮಗುರು ಮೌಲಾನಾ ಮುಷ್ಠಿ ಸಮೀರ್ ಮತ್ತು ಕಾರ್ಕಳ ಜಾಮೀಯ ಮಸೀದಿಯ ಮೌಲಾನ ಜಾಹಿರ್ ಅಹ್ಮದ್ ಅಲ್ಮಾಸ್ಮಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನಿರ್ವಹಿಸ ಲಾಯಿತು.
ಅದೇ ರೀತಿ ಜಿಲ್ಲೆಯ ಇಂದ್ರಾಳಿ,ಕುಕ್ಕಿಕಟ್ಟೆ, ಶಾಂತಿನಗರ, ಬ್ರಹ್ಮಗಿರಿ,ಮಣಿಪಾಲ, ನಾವುಂದ, ಗಂಗೊಳ್ಳಿ, ಮಲ್ಪೆ, ನಿಟ್ಟೆ, ಪಡುಬಿದ್ರೆ, ಕಾಪು ಸಹಿತ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ಹಂಚಿಕೊಂಡರು. ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.