ಬಜ್ಪೆ: ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ
ಮಂಗಳೂರು: ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 10 ಕೆಜಿ ತೂಕದ ಬಾಂಬ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ 10 ಕೆಜಿ ತೂಕದ ಬಾಂಬ್ ಸ್ಫೋಟವಾಗಿದ್ರೆ ಸುಮಾರು 500 ಮೀಟರ್ ಸುತ್ತಲಿನ ವ್ಯಾಪ್ತಿಯಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು.
ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಅನುಮಾನಾಸ್ಪದವಾದ ಲ್ಯಾಪ್‍ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಸಂಶಯದ ಮೇಲೆ ಬ್ಯಾಗ್ ಪರಿಶೀಲನೆ ನಡೆಸಿದಾಗ ಜೀವಂತ ಬಾಂಬ್ ಪತ್ತೆಯಾಗಿತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಇತ್ತ ಸಿಐಎಸ್‍ಎಫ್ ಸಿಬ್ಬಂದಿ ಸಜೀವ್ ಬಾಂಬ್ ನ್ನು ನಿಲ್ದಾಣದಿಂದ ಹೊರ ತಂದು ನಿಷ್ಕ್ರಿಯ ವಾಹನದಲ್ಲಿ ಇರಿಸಲಾಗಿದೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ಗಮನಿಸಿದ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ.
ಬಾಂಬ್ ನಿಷ್ಕ್ರೀಯಗೊಳಿಸುವ ವಾಹನ ಲ್ಯಾಪ್ ಟಾಪ್ ಬ್ಯಾಗ್‌ನಂತಿರುವ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ವಾಹನದೊಳಕ್ಕೆ ಸಾಗಿಸಲಾಗಿದೆ. ಪರಿಶೀಲನೆ ಆರಂಭವಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸದ್ಯಕ್ಕೆ ವಿಮಾನ ನಿಲ್ದಾಣದ ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ.
ಅಪರಿಚಿತ ವ್ಯಕ್ತಿಗಳು ಆಟೊ ರಿಕ್ಷಾದಲ್ಲಿ ಬಂದು ಬ್ಯಾಗ್ ಇರಿಸಿ ಹೋಗಿದ್ದಾರೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.