ಡಿಕೆಶಿಗೆ ಜಾಮೀನು, ಉಪ ಚುನಾವಣೆ ಮೇಲೆ ಪರಿಣಾಮ ಬೀರಲ್ಲ:ಕೋಟ
ಉಡುಪಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಲಭಿಸಿದ್ದು, ಆದರೆ ಅವರಿಗೆ ಜಾಮೀನು ಲಭಿಸುವುದರಿಂದ ಉಪಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ನೂರು ವರ್ಷಕ್ಕೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ತನ್ನ ವಿಚಾರಧಾರೆಯನ್ನು ಮೀರಿ ವರ್ತಿಸುತ್ತಿದೆ. ಬಿಜೆಪಿ ಪಕ್ಷವು ಗಾಂಧಿ ಪಥದಲ್ಲಿದ್ದು, ಕಾಂಗ್ರೆಸ್ ಜವಾಬ್ದಾರಿ ರಹಿತ ನಡೆವಳಿಕೆ ತೋರಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ಬಿಡುಗಡೆಯಾದ ವಿಚಾರಕ್ಕೆ ನಡೆದ ವಿಜಯೋತ್ಸವಕ್ಕೆ ಟೀಕೆ ಮಾಡಿದ ಅವರು, ಕಾಂಗ್ರೆಸ್ ಪಕ್ಷ ಗಾಂಧಿಯನ್ನು ಮರೆತ್ತಿದ್ದು, ಪಕ್ಷ ಸದ್ಯ ತನ್ನ ಕೊನೆ ಅವಸ್ಥೆಯನ್ನು ತಲುಪಿದೆ. ಡಿಕೆಶಿ ಅವರ ಪ್ರಕರಣ ಇಡಿ ಸಂಬಂಧಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಡಿಕೆಶಿ ಪ್ರಕರಣ ಸೇರಿದಂತೆ ಅವರಿಗೆ ಜಾಮೀನು ಲಭಿಸಿರುವುದು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ಚುನಾವಣೆಯಲ್ಲಿ ಖಂಡಿತ ಗೆಲುವು ಪಡೆಯಲಿದೆ ಎಂದರು.
ನೆರೆ ಪರಿಹಾರದಿಂದ ರಾಜ್ಯ ಸರ್ಕಾರ ಸ್ವಲ್ಪವೂ ಹಿಂದೆ ಸರಿದಿಲ್ಲ. ಉಪ ಚುನಾವಣೆ ರಾಜಕೀಯ ವಿಚಾರ. ನೆರೆ ಪರಿಹಾರ ಕಾರ್ಯಕ್ಕೆ ಉಪ ಚುನಾವಣೆಯಿಂದ ಅಡ್ಡಿಯಾಗಲ್ಲ. 20 ಕ್ಕೂ ಹೆಚ್ಚು ಜಿಲ್ಲೆಯಲ್ಲಿ ಪ್ರವಾಹ ಮೊದಲೇ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾಗುತ್ತಿದೆ. ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಉಸ್ತುವಾರಿ ಮಂತ್ರಿಗಳು, ಶಾಸಕರು ಸ್ವತ: ಸಿಎಂ ಕಾರ್ಯೋನ್ಮುಖರಾಗಿದ್ದಾರೆ ಪ್ರವಾಹ ಸಂತ್ರಸ್ಥರಿಗೆ ಭಯ ಬೇಡ ಎಂದಿದ್ದಾರೆ. ಎರಡೂ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.