ಡಿಜಿಟಲ್ ಅಪರಾಧಗಳ ಬಗ್ಗೆ ಅರಿವು ಅಗತ್ಯ- ನ್ಯಾ. ಪಣೀಂದ್ರ
ಉಡುಪಿ : ಇಂದಿನ ಆಧುನಿಕ ಜಗತ್ತಿನಲ್ಲಿ ನಡೆಯುತ್ತಿರುವ ಡಿಜಿಟಲ್ ಅಪರಾಧಗಳು ಮತ್ತು ಅವುಗಳ ತನಿಖಾ ವಿಧಾನ ಮತ್ತು ಸಾಕ್ಷ್ಯ ಸಂಗ್ರಹದ ಬಗ್ಗೆ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಸೂಕ್ತ ಅರಿವು ಹೊಂದಿರಬೇಕು ಎಂದು ರಾಜ್ಯ ಹೈಕೋರ್ಟ್ ನ ನ್ಯಾಯಾಧೀಶ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಗವರ್ನರ್ ನ್ಯಾ. ಕೆ.ಎನ್. ಫಣೀಂದ್ರ ಹೇಳಿದ್ದಾರೆ.
ಅವರು ಶನಿವಾರ, ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ನ್ಯಾಯಂಗ ಅಕಾಡೆಮಿ ಬೆಂಗಳೂರು, ಉಡುಪಿ ಜಿಲ್ಲಾ ನ್ಯಾಯಾಲಯ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ , ಜಿಲ್ಲೆಯ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು , ವಕೀಲರು ಮತ್ತು ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳಿಗೆ ನಡೆದ ಎಲೆಕ್ಟ್ರಾನಿಕ್ಸ್ ಪುರಾವೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 2000 ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಇದುವರೆಗೆ ಈ ಕುರಿತು ಸೂಕ್ತ ಅರಿವು ಇಲ್ಲದಿರುವುದರಿಂದ , ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಅಪರಾಧಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲು ಸಾಧ್ಯವಾಗುತ್ತಿಲ್ಲ , ಡಿಜಿಟಲ್ ಮೂಲಕ ನಡೆಯುವ ವಿವಿಧ ರೀತಿಯ ಅಪರಾಧಗಳ ಬಗ್ಗೆ ಸಂಪೂರ್ಣ ಮಾಹಿತಿ, ಸಾಕ್ಷ್ಯಗಳ ಸಂಗ್ರಹ, ಅವುಗಳನ್ನು ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸುವ ವಿಧಾನ , ಅವುಗಳ ಸಂರಕ್ಷಣೆ ಕುರಿತಂತೆ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಸೂಕ್ತ ಅರಿವು ನೀಡುವ ಉದ್ದೇಶದಿಂದ ರಾಜ್ಯಾದ್ಯಾಂತ ಕಾರ್ಯಗಾರವನ್ನು ಏರ್ಪಡಿಸಲಾಗುತ್ತಿದೆ ಎಂದು ನ್ಯಾ. ಫಣೀಂದ್ರ ತಿಳಿಸಿದರು.
ಪ್ರಸ್ತುತ ಇಂಟರ್ನೆಟ್ ಮೂಲಕ ಯಾವುದೇ ಸುಳಿವು ನೀಡದ ರೀತಿಯಲ್ಲಿ ಡಿಜಿಟಲ್ ಅಪರಾಧಗಳು ನಡೆಯುತ್ತಿದ್ದು, ಈ ಅಪರಾಧಗಳನ್ನು ಭೇಧಿಸುವ ನೈಪುಣ್ಯತೆ ಹಾಗೂ ತನಿಖೆಯ ವಿಧಾನ, ಸಾಕ್ಷ್ಯಗಳ ಸಂಗ್ರಹ ಮತ್ತು ಜವಾಬ್ದಾರಿ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಈ ಕಾರ್ಯಗಾರಗಳ ಮೂಲಕ ತಿಳಿಸಲಾಗುತ್ತಿದೆ, ಇಂತಹ ಅಪರಾಧಗಳ ಕುರಿತು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇತರೆ ನ್ಯಾಯಾಲಯಗಳು ತೀರ್ಪು ನೀಡಿದ್ದು, ಡಿಜಿಟಲ್ ಅಪರಾಧ ತಡೆಯುವಲ್ಲಿ ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಸಮನ್ವಯದ ಕೊರತೆ ಇರಬಾರದು, ಪರಸ್ಪರ ಸಹಕಾರದೊಂದಿಗೆ ಇಂತಹ ಅಪರಾಧ ತಡೆಯಬೇಕು ಎಂದು ನ್ಯಾ.ಫಣೀಂದ್ರ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹೈಕೋರ್ಟ್ ನ ನ್ಯಾಯಾಧೀಶ ಹಾಗೂ ಉಡುಪಿ ನ್ಯಾಯಾಲಯದ ಆಡಳಿತ ನ್ಯಾಯಾಧೀಶ ನ್ಯಾ. ಬಿ.ಎ.ಪಾಟೀಲ್ ಮಾತನಾಡಿ, ಡಿಜಿಟಲ್ ಅಪರಾಧ ಸಂದರ್ಭದಲ್ಲಿ , ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ, ಸತ್ಯದ ಅನ್ವೇಷಣೆ ನಡೆದು ಸಂಬಂದಪಟ್ಟವರಿಗೆ ಶಿಕ್ಷೆ ಆಗಬೇಕು, ಡಿಜಿಟಲ್ ಪುರಾವೆಗಳ ಸಂಗ್ರಹ ಮತ್ತು ರಕ್ಷಣೆ ಕುರಿತು ಅರಿವು ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಗದೀಶ್, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಹಿರಿಯ ಸದಸ್ಯ ಭೃಂಗೇಶ್, ಸೈಬರ್ ಸೆಕ್ಯುರಿಟಿ ಟ್ರೈನರ್ ಡಾ. ಅನಂತ ಪ್ರಭು, ಬೆಂಗಳೂರು ಸೈಬರ್ ಕ್ರೈಂ ಠಾಣೆಯ ಇನ್ಸ್‍ಪೆಕ್ಟರ್ ಯಶವಂತ ಕುಮಾರ್, ಉಡುಪಿ ವಕೀಲರ ಸಂಘಧ ಅಧ್ಯಕ್ಷ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ನ್ಯಾಯಾಧೀಶ ಸಿ.ಎಮ್ ಜೋಷಿ ಸ್ವಾಗತಿಸಿದರು. ಎಸ್ಪಿ ನಿಶಾ ಜೇಮ್ಸ್ ವಂದಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ನಿರೂಪಿಸಿದರು.