ಪೇಜಾವರಶ್ರೀ ನಿಧನ: ಅಭಿಮಾನಿಗಳ ಸಂತಾಪ
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂತಾಪ
ಪೇಜಾವರ ಸ್ವಾಮೀಜಿಯ ನಿಧನಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಸ್ವಾಮೀಜಿಯ ಅಗಲಿಕೆಯ ಸುದ್ದಿ ದುಃಖ ತಂದಿದೆ. ಹಿಂದೂಧರ್ಮದ ಪ್ರಮುಖ ಸ್ವಾಮಿಜಿಯಾಗಿದ್ದ ಪೇಜಾವರರು ತಮ್ಮ ನಿಲುವನ್ನು ನೇರವಾಗಿ ವ್ಯಕ್ತಪಡಿಸುತ್ತಿದ್ದರು. ಅವರ ಅಗಲಿಕೆಯಿಂದಾಗಿ ಒರ್ವ ಹಿರಿಯ ಧರ್ಮದರ್ಶಿ ಕಳೆದುಕೊಂಡಂತಾಗಿದೆ ಎಂದು ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೇಜಾವರ ಶ್ರೀಗಳಿಗೆ ಡಾ. ಜಯಮಾಲಾ ಅಶ್ರುತರ್ಪಣ. ಪೇಜಾವರ ಶ್ರೀಗಳು ನಮ್ಮ ನಡುವೆ ಇದ್ದ ದೈವಾಂಶ ಸಂಭೂತರಾಗಿದ್ದರು. ಅವರಿಗೆ ಇಡೀ ಭಾರತವೇ ಕರ್ಮಭೂಮಿ ಆಗಿತ್ತು. ಒಬ್ಬ ಕರ್ಮಯೋಗಿಯಾಗಿ ನಮ್ಮಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿಗೆ ಕಾರಣರಾಗಿ ಜನಮಾನಸದಲ್ಲಿ ಶ್ರೀಗಳು ಚಿರಸ್ಥಾಯಿಯಾಗಿದ್ದಾರೆ. ನಾನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಹಲವು ಸಂದರ್ಭಗಳಲ್ಲಿ ಅನೇಕ ಸಮಸ್ಯೆಗಳು, ಸವಾಲುಗಳು ಎದುರಾದಾಗ ನನಗೆ ಅತ್ಯಂತ ಸೂಕ್ತವಾಗಿ ಅವರು ಮಾರ್ಗದರ್ಶನ ನೀಡುತ್ತಿದ್ದರು. ಶ್ರೀಗಳು ಎಲ್ಲರನ್ನೂ, ಎಲ್ಲಾ ವರ್ಗದವರನ್ನು ಅತ್ಯಂತ ಸಮಾನವಾಗಿ ಕಾಣುತ್ತಾ ಅವರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತಿದ್ದರು. ಈ ಮಹಾನ್ ಚೇತನಕ್ಕೆ ನಾನು ಗೌರವಪೂರ್ವಕವಾಗಿ ಪ್ರಣಾಮಗಳನ್ನು, ಅಶೃತರ್ಪಣಗಳನ್ನು ಅರ್ಪಿಸಬಯಸುತ್ತೇನೆ.
ಪೇಜಾವರ ಶ್ರೀಗಳ ನಿಧನಕ್ಕೆ ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ಯುಗಪುರುಷ ಪ್ರಕಟಣೆಯ ಅನೇಕ ಪುಸ್ತಕಗಳು ಹಾಗೂ ವಿಶೇಷ ಸಂಚಿಕೆಗಳನ್ನು ಅನಾವರಣಗೊಳಿಸಿದ್ದರು. ಶ್ರೀಗಳು ನಮ್ಮ ಸಂಸ್ಥೆ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು ಎಂದು ಉಡುಪ ತಿಳಿಸಿದ್ದಾರೆ.
ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ನಿಧನದಿಂದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಸಕ್ರಿಯರಾಗಿದ್ದ ಕೇವಲ ಓರ್ವ ಸ್ವಾಮೀಜಿಯವರನ್ನು ಮಾತ್ರವಲ್ಲದೇ ಇಳಿ ವಯಸ್ಸಿನಲ್ಲಿಯೂ ಅವಿರತ ಕಾರ್ಯವನ್ನು ನಡೆಸಿದ, ಯುವಕರಿಗೆ ಪ್ರೇರಣಾದಾಯಕರಾಗಿದ್ದ ಓರ್ವ ಮಹಾನ್ ಸ್ವಾಮೀಜಿಯವರನ್ನು ಕಳೆದುಕೊಂಡಿದ್ದೇವೆ. ತಮ್ಮ ಆರನೇ ವಯಸ್ಸಿನಲ್ಲಿ ಸನ್ಯಾಸದೀಕ್ಷೆ ಪಡೆದು 21 ನೇ ವರ್ಷಕ್ಕೆ ಮೊದಲ ಪರ್ಯಾಯ ಪೀಠಾರೋಹಣ ಮಾಡಿದ್ದ ಪೂಜ್ಯ ಶ್ರೀಗಳು ಸತತ ಅನ್ನದಾನ, ಜ್ಞಾನದಾನ ಮುಂತಾದ ರೀತಿಯಲ್ಲಿ ಜನಸಾಮಾನ್ಯರಿಗೆ ಆಸರೆ ನೀಡಿದ ಅವರ ಕಾರ್ಯ ಸ್ಫೂರ್ತಿದಾಯಕವಾಗಿದೆ. ರಾಮಮಂದಿರದ ಹೋರಾಟವು ಅವಿಸ್ಮರಣೀಯವಾಗಿದ್ದು ಬಹಳಷ್ಟು ಶ್ರಮಿಸಿದ್ದರು. ತಮ್ಮ ಪೂರ್ಣ ಜೀವನವನ್ನು ಧರ್ಮಕಾರ್ಯಕ್ಕಾಗಿ ಮೀಸಲಿಟ್ಟು ಸಮಸ್ತ ಜನರೆದುರು ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಇಂದಿನ ಯುವಕರು ಸೇರಿದಂತೆ ಸಮಸ್ತರು ಇದರಿಂದ ಪ್ರೇರಣೆ ಪಡೆಬೇಕು. ಇದೇ ಅವರಿಗೆ ಅರ್ಪಿಸುವ ನಿಜವಾದ ಕೃತಜ್ಞತೆಯಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀಗಳ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತ ಅವರ ಚರಣಗಳಲ್ಲಿ ಭಾವಪೂರ್ಣ ನಮಸ್ಕಾರಗಳನ್ನು ಸಲ್ಲಿಸುತ್ತೇವೆ ಮತ್ತು ಅವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇವೆ. ಮೋಹನ ಗೌಡರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,ಕರ್ನಾಟಕ ರಾಜ್ಯ.
ಶ್ರೀಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಂದ ಸಂತಾಪ ಸಂದೇಶ.
ಎಲ್ಲರಿಗೂ ಈಶರಾಗಿದ್ದ ವಿಶ್ವೇಶತೀರ್ಥರು,ಅಷ್ಟೇ ಜ್ಞಾನಿಗಳೂ ಆಗಿದ್ದರು.ಅವರ ಪ್ರಾಣೋತ್ಕ್ರಮಣ ಸಂದರ್ಭದಲ್ಲಿ ಆಕಾಶವು ಮೋಡದಿಂದ ಆವರಿಸಿ ಸೂರ್ಯನು ಮರೆಯಾಗಿದ್ದನು.ಸಮಾಜಕ್ಕೆ ಜ್ಞಾನ ಸೂರ್ಯನಂತೆ ಇದ್ದ ಶ್ರೀಪಾದರು ಇಂದು ಮರೆಯಾಗಿದ್ದಾರೆ,ಅದರ ಸಂಕೇತವನ್ನು ಭಗವಂತನೇ ಅಂತಹ ವಾತಾವರಣವನ್ನು ಅಷ್ಟೊತ್ತಿನಲ್ಲಿ ಸೃಷ್ಟಿಸಿದ್ದನು.ಅಂದರೆ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯರಾದ ಕಾರಣ,ದೇವರು ಅವರನ್ನು ಕರೆಸಿಕೊಂಡಿದ್ದಾನೆ.ಜ್ಞಾನಿಗಳಿಗೆ ಬೆಳಕಿನಂತಿದ್ದ ಜ್ಞಾನ ಸೂರ್ಯನನ್ನು ಇಡೀ ವಿಶ್ವವೇ ಕಳೆದುಕೊಂಡಂತಾಗಿದೆ.