ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: ಸರ್ಕಾರಿ ನೌಕರರಿಗೆ ಆದೇಶ
ಬೆಂಗಳೂರು: ಲಾಕ್’ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ಕಚೇರಿಗಳ ಪೈಕಿ ಅತ್ಯಗತ್ಯ ಸೇವೆ ಒದಗಿಸುವ ಆರೋಗ್ಯ ಇಲಾಖೆ ಸೇರಿದಂತೆ 14 ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸಚಿವಾಲಯ ಸೇರಿ ಅಗತ್ಯ ಸೇವೆ ಒದಗಿಸುತ್ತಿರುವ ಆರೋಗ್ಯ, ವೈದ್ಯಕೀಯ, ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವದ್ಧಿ, ನಗರಾಭಿವೃದ್ಧಿ, ಆಹಾರ, ವಾರ್ತಾ, ಸಾರಿಗೆ, ಇಂಧನ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದರಂತೆ ಮಾರ್ಚ್ 24 ರಿಂದಲೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ರಜೆ ಬೇಕೆನ್ನುವ ನೌಕರರು ರಜೆ ತೆಗೆದುಕೊಂಡು ಸೆಲ್ಫ್ ಕ್ವಾರಂಟೈನ್ ನಲ್ಲಿರಬಹುದು ಎಂದು ಸರ್ಕಾರ ತಿಳಿಸಿತ್ತು.