ಮುಸಲ್ಮಾನರು ಹಾಗೂ ದಲಿತರ ಮೇಲೆ ದೌರ್ಜನ್ಯ ಆರೋಪ : ಮಡಿಕೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಮಡಿಕೇರಿ: ದೇಶದ ವಿವಿಧೆಡೆ ಮುಸಲ್ಮಾನರು ಹಾಗೂ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಘಟನೆ ವತಿಯಿಂದ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಲ್ಲೆ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ದೇಶದ ದಲಿತ ಸಮಮುದಾಯ ಎಲ್ಲರಂತೆ ಸಮಾನತೆಯಿಂದ ಬದುಕಬೇಕು ಎನ್ನುವ ಆಶಯದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಜಾರಿಗೆ ತಂದಿದ್ದರು, ಮುಸಲ್ಮಾನರು ಹಾಗೂ ದಲಿತರ ಮೇಲಿನ ದೌರ್ಜನ್ಯ ಇನ್ನೂ ಕೂಡ ನಿಂತಿಲ್ಲವೆಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಅಬ್ದುಲ್ ಹ್ಯಾರಿಸ್ ಮಾತನಾಡಿ, ಕಳೆದ 4 ವರ್ಷಗಳಿಂದ ದಲಿತ ಹಾಗೂ ಮುಸ್ಲಿಂ ವರ್ಗದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ದಲಿತ ವಿದ್ಯಾರ್ಥಿ ಎಸ್.ಪ್ರದೀಪ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಬೆಂಗಳೂರಿನ ರಾಮನಗರದಲ್ಲಿ ಸೈಯ್ಯದ್ ತೌಫಿಕ್ ಎಂಬ ಅಮಾಯಕನ ಮೇಲೆ ದೌರ್ಜನ್ಯ ನಡೆದು ಎರಡು ತಿಂಗಳು ಕಳೆದರು ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಹತ್ಯೆಗೀಡಾದವರ ಕುಟುಂಬ ವರ್ಗಕ್ಕೆ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್, ನಗರಾಧ್ಯಕ್ಷ ಮನ್ಸೂರ್, ಕಾರ್ಯದರ್ಶಿ ರಿಯಾಜ್, ಪಿಎಫ್‌ಐ ಕಾರ್ಯದರ್ಶಿ ಇಬ್ರಾಹಿಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!