ಶಿರ್ವ ಚರ್ಚ್ಗೆ ಧರ್ಮಗುರುಗಳ ಪ್ರಾರ್ಥಿವ ಶರೀರ ಆಗಮನ
ಉಡುಪಿ: ಶುಕ್ರವಾರ ನಿಧನರಾದ ಶಿರ್ವ ಚರ್ಚ್ನ ಸಹಾಯಕ ಧರ್ಮಗುರು ಮತ್ತು ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಫಾ.ಮಹೇಶ್ ಡಿಸೋಜಾ ಅವರ ಪಾರ್ಥಿವ ಶರೀರ ಇಂದು ಶಿರ್ವ ಸಾವೊದ್ ಮಾತೆಯ ಚರ್ಚ್ಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ತರುತ್ತಿದ್ದಂತೆ ಅವರ ನೂರಾರು ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮಣಿಪಾಲ ಕೆ.ಎಮ್.ಸಿ ಶವಗಾರದಿಂದ ಇಂದು ಬೆಳಿಗ್ಗೆ ನೇರವಾಗಿ ಫಾ.ಮಹೇಶ್ ಅವರ ತಂದೆ ತಾಯಿ ವಾಸ ಮಾಡುತ್ತಿರುವ ಮಣಿಪಾಲದ ಫ್ಲ್ಯಾಟ್ಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿದ್ದು ಅಲ್ಲಿ ಅವರ ಕುಟುಂಬ ವರ್ಗದ ಸದಸ್ಯರು ಧರ್ಮಗುರುಗಳ ಅಂತಿಮ ದರ್ಶನ ಪಡೆದರು. ಅಲ್ಲಿ ಅವರ ಸಹೋದರರು, ಕುಟುಂಬ ವರ್ಗದ ಜೊತೆ ಊರಿನ ನೂರಾರು ಜನ ಅವರ ಅಂತಿನ ದರ್ಶನ ಪಡೆದರು.
ಪ್ರಾರ್ಥಿವ ಶರೀರವನ್ನು ಬಳಿಕ ಶಿರ್ವ ದೇವಾಲಯಕ್ಕೆ ವಾಹನದ ಮೂಲಕ ತರಲಾಯಿತು. ನೂರಾರು ವಿದ್ಯಾರ್ಥಿಗಳು ಶಿಕ್ಷಕರು ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಡೆನ್ನಿಸ್ ಡೇಸಾ ತನ್ನ ಸಹ ಧರ್ಮಗುರುವಿನ ಅಗಲುವಿಕೆಗೆ ರೋದನ ಮಾಡುತ್ತಿರುವುದು ಮತ್ತು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ ಫಾ ಡೆನ್ನಿಸ್ ಡೆಸಾ ಅವರನ್ನು ಸಾಂತ್ವನ ನೀಡುತ್ತಿರುವುದು ಕಂಡು ಬಂತು. ಪ್ರಾರ್ಥಿವ ಶರೀರವನ್ನು ದೇವಾಲಯಕ್ಕೆ ತೆಗೆದುಕೊಂಡು ಬರುತ್ತಿದ್ದಂತೆ ಪ್ರಾರ್ಥನಾ ವಿಧಿಗಳು ನಡೆದವು.
ಸಾರ್ವಜನಿಕರಿಗೆ ಮಧ್ಯಾಹ್ನ 2.30 ಗಂಟೆಯವರೆಗೆ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಮಾಡಲು ಅವಕಾಶವಿದೆ. 3 ಗಂಟೆಗೆ ಉಡುಪಿ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ ಜೆರಾಲ್ಡ್ ಐಸಾಕ್ ಲೋಬೋರವರ ನೇತೃತ್ವದಲ್ಲಿ ನೂರಾರು ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನಾ ವಿಧಿಗಳು ನಡೆಯಲಿವೆ.